ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯೋಗ ಶಿಕ್ಷಕರಾಗಿರುವ ಹಾಗೂ ಯೋಗ ಇನ್‌ಸ್ಟಿಟ್ಯೂಟ್‌ನ ತಾಲೂಕು ಉಸ್ತುವಾರಿಯಾಗಿರುವ ಗೋವಿಂದ ಎನ್. ದೇವಾಡಿಗ (ಗೋವಿಂದ ಗುರೂಜಿ) ಅವರಿಗೆ ಯೋಗ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದಿ ಇಂಡಿಯನ್ ಫೋರಂ ಫಾರ್ ಸೋಶಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ ಸಂಸ್ಥೆ ಆಯೋಜಿಸಿದ್ದ ‘ಭಾರತೀಯ ಯೋಗ ಎಕ್ಸಲೆನ್ಸ್ ಅವಾರ್ಡ್ಸ್–2026’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಬಂಧಿತ ಸಂಸ್ಥೆಯು ಭಾರತ ಸರ್ಕಾರದ ನೀತಿ ಆಯೋಗದಡಿ ನೋಂದಾಯಿತ ಸಂಸ್ಥೆಯಾಗಿದೆ.
ಯೋಗ, ಮೈಂಡ್‌ಫುಲ್‌ನೆಸ್, ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಗೋವಿಂದ ಗುರೂಜಿಯವರು ಸಲ್ಲಿಸಿರುವ ನಿರಂತರ ಸೇವೆ, ಸಮರ್ಪಣೆ ಹಾಗೂ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹಲವು ವರ್ಷಗಳಿಂದ ಯೋಗ ತರಬೇತಿ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೇಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋವಿಂದ ಗುರೂಜಿಯವರು, ಯೋಗಾಭ್ಯಾಸದ ಮೂಲಕ ಸಾವಿರಾರು ಮಂದಿಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಪರಿಚಯಿಸಿದ್ದಾರೆ.
ಈ ಗೌರವ ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗೋವಿಂದ ಗುರೂಜಿಯವರ ಸಾಧನೆ ಯುವಜನರಲ್ಲಿ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸವನ್ನು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಘೋಷಣೆಯ ಬಳಿಕ ಗೋವಿಂದ ಗುರೂಜಿಯವರಿಗೆ ವಿವಿಧ ಕ್ಷೇತ್ರಗಳ ಗಣ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಷ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಮುಂದಿನ ದಿನಗಳಲ್ಲಿಯೂ ಅವರ ಯೋಗ ಸೇವೆ ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಶುಭ ಹಾರೈಕೆಗಳು ವ್ಯಕ್ತವಾಗಿವೆ.
