ಭಟ್ಕಳ: ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸಕ ಡಾ. ಅರುಣ್ ಕುಮಾರ್ ಅವರ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರಿಗೆ ವಾಟ್ಸಾಪ್ ಮೂಲಕ ದೂರು ಸಲ್ಲಿಸಿರುವ ಪ್ರಕರಣ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದೂರಿನಲ್ಲಿ ಮಾಡಿರುವ ಆರೋಪಗಳ ಸತ್ಯಾಸತ್ಯತೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅಣ್ಣಪ್ಪ ಅಭಿಹಿತ್ಲು ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಅಭಿಪ್ರಾಯದಂತೆ, ಡಾ. ಅರುಣ್ ಕುಮಾರ್ ಅವರು ಹಲವು ವರ್ಷಗಳಿಂದ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಕಾರ್ಯಕ್ಷಮತೆಗಾಗಿ 2023–24ನೇ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಮೂಲಕ ಜನರ ವಿಶ್ವಾಸ ಗಳಿಸಿರುವ ವೈದ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿದ್ದರೂ ತುರ್ತು ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸರ್ಕಾರಿ ಆಸ್ಪತ್ರೆಯ ಸೇವಾ ಗುಣಮಟ್ಟ ಹೆಚ್ಚಿಸಲು ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ 2026–27ನೇ ಸಾಲಿನ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ (ಎಬಿ–ಆರ್ಕೆ) ಯೋಜನೆಯ ರಾಜ್ಯಮಟ್ಟದ ಶ್ರೇಯಾಂಕದಲ್ಲಿ ಆಸ್ಪತ್ರೆ 37ನೇ ಸ್ಥಾನ ಪಡೆದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಅನಾಮಧೇಯ ದೂರುಗಳ ಮೂಲಕ ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆರೋಪಗಳು ಸಾಬೀತಾಗದಿದ್ದರೆ ಸುಳ್ಳು ದೂರು ಸಲ್ಲಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಡಾ. ಅರುಣ್ ಕುಮಾರ್ ಅವರ ವಿರುದ್ಧ ಯಾವುದೇ ಏಕಪಕ್ಷೀಯ ಆಡಳಿತಾತ್ಮಕ ಕ್ರಮ ಕೈಗೊಳ್ಳಬಾರದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ತನಿಖೆ ನಡೆಸದೆ ಕ್ರಮ ಕೈಗೊಂಡರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, “ಡಾ. ಅರುಣ್ ಕುಮಾರ್ ಅವರ ಸೇವೆಯಿಂದ ವಿವಿಧ ಭಾಗಗಳಿಂದ ರೋಗಿಗಳು ಚಿಕಿತ್ಸೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಅವರ ಚಿಕಿತ್ಸೆಯಿಂದ ಗುಣಮುಖರಾದ ಅನೇಕರು ಅವರಿಗೆ ಅಪಾರ ಗೌರವ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸೇವಾ ಮನೋಭಾವದ ವೈದ್ಯರ ವಿರುದ್ಧ ಅನಾಮಧೇಯವಾಗಿ ದೂರು ಸಲ್ಲಿಸಿರುವುದು ಸರಿಯಲ್ಲ,” ಎಂದು ಹೇಳಿದರು.
ಎನ್.ಡಿ. ಖಾರ್ವಿ ಮಾತನಾಡಿ, “ಸುಮಾರು ಒಂದು ತಿಂಗಳ ಹಿಂದೆ ನನ್ನ ಪತ್ನಿಗೆ ಇದೇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅನೇಕರು ಕರ್ತವ್ಯದ ಸಮಯ ಮುಗಿದ ಬಳಿಕ ಮನೆಗೆ ತೆರಳುವ ಸಂದರ್ಭದಲ್ಲೂ, ಡಾ. ಅರುಣ್ ಕುಮಾರ್ ಅವರು ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಆಸ್ಪತ್ರೆಯಲ್ಲೇ ಉಳಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ವೈದ್ಯರ ವಿರುದ್ಧ ದೂರು ಸಲ್ಲಿಸಿರುವುದು ಖಂಡನೀಯ. ಅಗತ್ಯವಿದ್ದರೆ ಸುಳ್ಳು ದೂರು ನೀಡಿದವರ ವಿರುದ್ಧ ನಾನೇ ದೂರು ನೀಡಲು ಸಿದ್ಧ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ ಅಭಿಹಿತ್ಲು, ವಿಶ್ವನಾಥ ಮಾಹಲೆ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ಹಳ್ಳೆರ್, ಬಾಬು ನಾಯ್ಕ, ನಾಗೇಶ್ ನಾಯ್ಕ, ಶಂಕರ್ ನಾಯ್ಕ, ಪಾಂಡುರಂಗ ನಾಯ್ಕ, ಶ್ರೀಧರ್ ನಾಯ್ಕ, ಅಪ್ಪು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

