
ಭಟ್ಕಳ: ಮಾಜಿ ಸಚಿವ ಹಾಗೂ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಸಿಗದಿರುವ ವಿಚಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮೀನುಗಾರ ಸಮುದಾಯದ ಮುಖಂಡರು, ಭಟ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿರುವ ವಿವಿಧ ಮೀನುಗಾರಿಕೆ ಸಹಕಾರಿ ಸಂಘಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು, ಈ ವಿಚಾರದಲ್ಲಿ ಪಕ್ಷದ ನಾಯಕತ್ವ ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ವಿಠಲ್ ದೈಮನೆ ಮಾತನಾಡಿ, ಮಂಕಾಳ ವೈದ್ಯರು ಸಚಿವರಾಗಿದ್ದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಮೀನುಗಾರ ಸಮುದಾಯಕ್ಕೆ ಹಲವು ಯೋಜನೆಗಳು ಮತ್ತು ನೆರವು ದೊರೆತಿವೆ ಎಂದು ಹೇಳಿದರು.ಸಮುದ್ರದಲ್ಲಿ ಮೀನುಗಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಪರಿಹಾರ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮಂಕಾಳ ವೈದ್ಯರು ಕ್ರಮ ಕೈಗೊಂಡಿದ್ದರು ಎಂದು ಅವರು ತಿಳಿಸಿದರು. ತಮ್ಮ ಹೇಳಿಕೆಯ ಪ್ರಕಾರ, ಮೀನುಗಾರರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ದೊರೆಯುವ ಯೋಜನೆ ಜಾರಿಯಾಗಲು ವೈದ್ಯರ ಪಾತ್ರ ಪ್ರಮುಖವಾಗಿತ್ತು.ಶಿರಾಲಿ ತಟ್ಟಿಹಾಕಲ್‌ನಲ್ಲಿ ನಡೆದ ದುರಂತದ ಬಳಿಕ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸುವಲ್ಲಿಯೂ ಮಂಕಾಳ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದರು ಎಂದು ವಿಠಲ್ ದೈಮನೆ ಹೇಳಿದರು.

ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ನಾಯಕನಿಗೆ ಸಚಿವ ಸ್ಥಾನ ನೀಡದಿರುವುದು ಉತ್ತರ ಕನ್ನಡ ಜಿಲ್ಲೆಗೆ ನಿರಾಸೆ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಚಿವರ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ಬಳಿಕ ಕೊನೆಯ ಹಂತದಲ್ಲಿ ಕೈಬಿಡಲಾಗಿದೆ ಎಂಬ ವಿಚಾರ ನಿಜವಾಗಿದ್ದರೆ, ಅದನ್ನು ಸರಿಪಡಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮೀನುಗಾರ ಮುಖಂಡ ರತ್ನಾಕರ್ ಖಾರ್ವಿ ಮಾತನಾಡಿ, ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಮೀನುಗಾರ ಸಮುದಾಯದಲ್ಲಿ ಅಸಮಾಧಾನ ಮೂಡಿದೆ ಎಂದು ಹೇಳಿದರು.
ಮಂಕಾಳ ವೈದ್ಯರು ಸರಳ ಸ್ವಭಾವದ ನಾಯಕರು ಹಾಗೂ ತಮ್ಮ ಪರವಾಗಿ ರಾಜಕೀಯ ಒತ್ತಡ ಹೇರುವ ರೀತಿಯ ವ್ಯಕ್ತಿಯಲ್ಲ ಎಂಬ ಕಾರಣದಿಂದಲೇ ಅವರಿಗೆ ಅನ್ಯಾಯವಾಗಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ತಿಳಿಸಿದರು.
ಮೀನುಗಾರ ಸಮುದಾಯವನ್ನು ಸಂಖ್ಯೆಯಲ್ಲಿ ಸಣ್ಣ ಸಮುದಾಯವೆಂದು ಪರಿಗಣಿಸಿ ನಿರ್ಲಕ್ಷಿಸಬಾರದು. ಮಂಕಾಳ ವೈದ್ಯರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ರತ್ನಾಕರ್ ಖಾರ್ವಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಭಾಸ್ಕರ್ ಮೊಗೇರ, ಜಟ್ಕಾ ಮೊಗೇರ ಸೇರಿದಂತೆ ವಿವಿಧ ಮೀನುಗಾರಿಕೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿರುವ ಮೀನುಗಾರ ಸಮುದಾಯದ ಮುಖಂಡರ ಈ ನಿಲುವನ್ನು ಕಾಂಗ್ರೆಸ್ ಪಕ್ಷದ ನಾಯಕತ್ವ ಹೇಗೆ ಪರಿಗಣಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

