ಭಟ್ಕಳ: ಮಂಗಳೂರಿನಿಂದ ಗುಜರಾತ್ ಕಡೆಗೆ ಪ್ರಯಾಣಿಸುತ್ತಿದ್ದ 33 ವರ್ಷದ ಮೆಕಾನಿಕ್ ಒಬ್ಬರು ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳ ಸಮೀಪದ ಸರ್ಫಿನಕಟ್ಟಾ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಗುಜರಾತ್‌ನ ವಡೋದರಾದ ನಿವಾಸಿ ಪವಾರ್ ಸುನೀಲ್ ಅಬ್ಬಾಪಾಯ ಎಂದು ಗುರುತಿಸಲಾಗಿದೆ. ಅವರು ಮೆಕಾನಿಕ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆಗಸ್ಟ್ 27ರಂದು ಮಂಗಳೂರಿನಿಂದ ಗುಜರಾತ್‌ಗೆ ತೆರಳಲು ಅವರು ಗಾಂಧಿಧಾಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದರು. ನಸುಕಿನ ಸುಮಾರು 3.30ರ ವೇಳೆಗೆ ರೈಲು ಭಟ್ಕಳದ ಸರ್ಫಿನಕಟ್ಟಾ ಪ್ರದೇಶದ ಮೂಲಕ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುನೀಲ್ ಅವರು ರೈಲಿನ ಬಾಗಿಲಿನ ಸಮೀಪಕ್ಕೆ ಬಂದಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ರೈಲಿನಿಂದ ಕೆಳಗೆ ಬಿದ್ದಿರುವ ಸಾಧ್ಯತೆ ಇದೆ. ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ಸಂಬಂಧಿ ಪವಾರ್ ರಾಜುಬಾಯಿ ಅವರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.