ಶಿರಸಿ-ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ, ಈವರೆಗೆ ಏಳು ಕ್ಷೇತ್ರಗಳ ಫಲಿತಾಂಶ ಹೊರಬಂದಿದ್ದು, ಉಳಿದ ಕ್ಷೇತ್ರಗಳ ಮತ ಎಣಿಕೆ ಕುರಿತ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ಶನಿವಾರ ಮತದಾನ ನಡೆದಿತ್ತು. ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಅದೇ ದಿನ ಸಂಜೆ ಮತ ಎಣಿಕೆಯ ಫಲಿತಾಂಶ ಪ್ರಕಟಿಸಿದರು. ಈ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಬಣಗಳ ನಡುವೆ ಕಠಿಣ ಪೈಪೋಟಿ ನಡೆಯಿತು. ಈಗಾಗಲೇ ಹೊರಬಂದ ಫಲಿತಾಂಶಗಳ ಪ್ರಕಾರ, ಶಿವರಾಮ ಹೆಬ್ಬಾರ್ ಬಣದವರು ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.
ಚುನಾವಣೆಗೂ ಮೊದಲು ಮಂಕಾಳ ವೈದ್ಯ ಬಣದ ಇಬ್ಬರು ಹಾಗೂ ಹೆಬ್ಬಾರ್ ಬಣದ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಸ್ಥಾನಗಳಿಗೆ ನಡೆದ ಸ್ಪರ್ಧೆಗೆ ಈಗ ತೆರೆಬಿದ್ದಿದೆ.
ವಿವಿಧ ಕ್ಷೇತ್ರಗಳ ಫಲಿತಾಂಶ ಹೀಗಿದೆ :
ಕುಮಟಾ: ರಾಜಗೋಪಾಲ ಅಡಿ 9 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಗಜಾನನ ಪೈ ಅವರಿಗೆ ಯಾವುದೇ ಮತ ಬಿದ್ದಿಲ್ಲ.
ಹಳಿಯಾಳ: ಎಸ್. ಎಲ್. ಘೋಟ್ನೇಕರ್ 9 ಮತ ಪಡೆದು ಜಯ ಗಳಿಸಿದ್ದು, ಸುಭಾಷ್ ಕೊರ್ವೇಕರ್ ಅವರಿಗೆ 4 ಮತ ಮಾತ್ರ ಸಿಕ್ಕಿವೆ.
ಜೋಯಿಡಾ: ಕೃಷ್ಣ ದೇಸಾಯಿ 5 ಮತ ಪಡೆದು ಗೆದ್ದಿದ್ದು, ಪುರುಷೋತ್ತಮ ಕಾಮತ್ 4 ಮತಪಡೆದು ಸೋತಿದ್ದಾರೆ.
ಮುಂಡಗೋಡ: ಎಚ್. ಎಮ್. ನಾಯ್ಕ 8 ಮತಗಳಿಂದ ಗೆಲುವು ಸಾಧಿಸಿದ್ದು, ಎಲ್. ಟಿ. ಪಾಟೀಲ್ ಅವರಿಗೆ 5 ಮತ ಸಿಕ್ಕಿವೆ.
ಉಳಿದ ಕ್ಷೇತ್ರಗಳ ಫಲಿತಾಂಶ ನ್ಯಾಯಾಲಯದ ತೀರ್ಪಿನ ನಂತರ ಪ್ರಕಟವಾಗುವ ಸಾಧ್ಯತೆ ಇದೆ.
–

