ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ದೃಢ ಹೋರಾಟಗಾರರಾದ ದಿವಂಗತ ಎಸ್. ಆರ್. ಬಂಗಾರಪ್ಪನವರ ೯೩ನೇ ಜನ್ಮದಿನದ ಅಂಗವಾಗಿ ಅವರ ಸೇವಾ ಕಾರ್ಯ ಮತ್ತು ಸಾಮಾಜಿಕ ಚಿಂತನೆಗಳನ್ನು ನೆನಪಿಸಿಕೊಳ್ಳಲಾಯಿತು. ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಈ ಸಂದರ್ಭ ಮಾತನಾಡಿದರು.

ರವೀಂದ್ರ ನಾಯ್ಕ ಅವರ ಮಾತಿನಲ್ಲಿ —
“ಬಂಗಾರಪ್ಪನವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಸಮಾಜದ ಹಿಂದುಳಿದ ವರ್ಗಗಳ ಹಿತದೃಷ್ಟಿಯಿಂದ ನಿಜವಾದ ಕೆಲಸ ಮಾಡಿದ ನಾಯಕರು. ಅವರ ಹುಟ್ಟುಹಬ್ಬದ ದಿನ, ಅವರು ಮಾಡಿದ ಸಾಮಾಜಿಕ ಕ್ರಾಂತಿ ಮತ್ತು ನ್ಯಾಯಕ್ಕಾಗಿ ನಡೆಸಿದ ಹೋರಾಟವನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ,” ಎಂದರು.
ಮುಖ್ಯಮಂತ್ರಿಯಾಗಿದ್ದ ವೇಳೆ ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ನ್ಯಾಯಕ್ಕಾಗಿ ತೆಗೆದುಕೊಂಡ ಹಲವು ನಿರ್ಧಾರಗಳು ಇಂದಿಗೂ ಜನಮನಗಳಲ್ಲಿ ಜೀವಂತವಾಗಿವೆ. ಕಾರವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚೆನ್ನಪ್ಪ ರೆಡ್ಡಿ ಆಯೋಗದ ವಿಚಾರದಲ್ಲಿ, ಪಡ್ತಿ, ಗುಣಗಿ, ಕೋಮಾರಪಂತ, ಕುಳವಾಡಿ ಮರಾಠಿ ಹಾಗೂ ಶೇರುಗಾರ ಮುಂತಾದ ಜಾತಿಗಳಿಗೆ ಮೀಸಲಾತಿ ಸಿಗದ ವಿಚಾರವನ್ನು ಅವರ ಗಮನಕ್ಕೆ ತಂದಾಗ, ತಕ್ಷಣ ಕ್ರಮ ಕೈಗೊಂಡು ಸಾಮಾಜಿಕ ನ್ಯಾಯ ಸಾಧಿಸಿದುದು ಅವರ ಸಂವೇದನಾಶೀಲ ನಾಯಕರತನದ ನಿದರ್ಶನವಾಗಿದೆ ಎಂದು ನಾಯ್ಕ ಹೇಳಿದರು.
ಇದೇ ರೀತಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ, ಕುಣಬಿ, ಗೌಳಿ ಮೊದಲಾದ ಜನಾಂಗಗಳನ್ನು ಬುಡಕಟ್ಟು ಪಂಗಡಕ್ಕೆ ಸೇರಿಸಲು ಬಂಗಾರಪ್ಪನವರು ಕೈಗೊಂಡ ಪ್ರಯತ್ನವೂ ಸ್ಮರಣೀಯವಾಗಿದೆ ಎಂದು ಅವರು ತಿಳಿಸಿದರು.
“ಅರಣ್ಯ ಪ್ರದೇಶದ ಆಶ್ರಯ ಪಟ್ಟ”
ಅರಣ್ಯ ಪ್ರದೇಶಗಳಲ್ಲಿ ತಲಾಂತರಗಳಿಂದ ವಾಸಿಸುತ್ತಿದ್ದ ಅರಣ್ಯವಾಸಿಗಳಿಗೆ ವಾಸ್ತವ್ಯ ಹಕ್ಕು ನೀಡುವ ಉದ್ದೇಶದಿಂದ ಬಂಗಾರಪ್ಪನವರು ಆಶ್ರಯ ಪಟ್ಟ ನೀಡಿದ ಕಾರ್ಯ ಜನಪರವಾದ ನಿರ್ಧಾರವಾಗಿತ್ತು ಎಂದು ನಾಯ್ಕ ಸ್ಮರಿಸಿದರು. ಆದರೆ ಇಂದಿಗೂ ಆ ಯೋಜನೆಗೆ ಕೇಂದ್ರ ಸರ್ಕಾರದ ಪೂರ್ಣ ಅನುಮತಿ ಸಿಗದಿರುವುದು ವಿಷಾದಕರ ಎಂದು ಅವರು ಅಭಿಪ್ರಾಯಪಟ್ಟರು.

