ಹೊನ್ನಾವರ ತಾಲ್ಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಬಸ್ ಹಾಗೂ ಕಾರು ನಡುವೆ ತೀವ್ರ ಅಪಘಾತ ಸಂಭವಿಸಿ, ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಒಬ್ಬ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾಹಿತಿ ಪ್ರಕಾರ, ಬೆಂಗಳೂರು ದಿಕ್ಕಿನಿಂದ ಭಟ್ಕಳ–ಗೇರುಸೊಪ್ಪ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್, ಹೊನ್ನಾವರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕಾರಿಗೆ ರಸ್ತೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಬಸ್‌ನಲ್ಲಿದ್ದ ಸುಮಾರು ಮೂವತ್ತು ಪ್ರಯಾಣಿಕರಲ್ಲಿ ಒಬ್ಬರು ಮೃತಪಟ್ಟಿದ್ದು, ಹತ್ತು ಜನರಿಗೆ ತೀವ್ರಗಾಯಗಳು ಸಂಭವಿಸಿದಂತೆ ತಿಳಿದು ಬಂದಿದೆ. ಕಾರಿನಲ್ಲಿದ್ದವರು ಸಹ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದ್ದಾರೆ.
			
