ಮುರುಡೇಶ್ವರ (ನ. 2): ರಾತ್ರಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ಕೂಟಿ ಸವಾರನೊಬ್ಬನಿಗೆ ನಾಲ್ವರು ಮಂಗಳಮುಖಿಯರಿಂದ ಹಲ್ಲೆ ಹಾಗೂ ಚಿನ್ನದ ಸರ ಕಳವು ನಡೆದ ಘಟನೆ ಮುರುಡೇಶ್ವರದ ರೈಲ್ವೆ ಸ್ಟೇಷನ್ ಹತ್ತಿರ ನಡೆದಿದೆ.
ಮಾವಳ್ಳಿ ಗುಮ್ಮನಕಲ್ ನಿವಾಸಿ ಹಾಗೂ ಆರ್‌ಎನ್‌ಎಸ್ ಡಿಪ್ಲೋಮಾ ಕಾಲೇಜಿನ ಲ್ಯಾಬ್ ಇಂಚಾರ್ಜ್ ಆಗಿರುವ ಅರುಣ್ ಕುಮಾರ್ (ತಂದೆ: ಭಾಸ್ಕರ ನಾಯ್ಕ) ಅವರು ಈ ಘಟನೆಯ ಬಲಿಯಾದವರು. ರಾತ್ರಿ ಕೆಲಸ ಮುಗಿಸಿಕೊಂಡು ಪೆಟ್ರೋಲ್ ಬಂಕ್‌ನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಮೂಲಕ ತೆರಳುತ್ತಿದ್ದ ವೇಳೆ ಇಬ್ಬರು ಮಂಗಳಮುಖಿಯರು ಅಡ್ಡಗಟ್ಟಿ ಮಾತುಕತೆ ಆರಂಭಿಸಿದರು.
ಅಷ್ಟರಲ್ಲೇ ಇನ್ನಿಬ್ಬರು ಮಹಿಳೆಯರು ಸ್ಥಳಕ್ಕೆ ಬಂದು ಸೇರಿದರು. ಮಾತನಾಡುವ ನೆಪದಲ್ಲಿ ಅಸಭ್ಯ ವರ್ತನೆ ತೋರಿದ ಅವರು ಅರುಣ್ ಕುಮಾರ್ ಅವರ ಕುತ್ತಿಗೆಯಲ್ಲಿದ್ದ ಸುಮಾರು ₹1 ಲಕ್ಷ ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು, ಎಲ್ಲರೂ ಸೇರಿ ಮಂಕಿ ದಿಕ್ಕಿಗೆ ಓಡಿ ಹೋದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

