ಬೆಂಗಳೂರು- ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಾರ್ಯ ಈಗ ಅಂತಿಮ ಹಂತ ತಲುಪಿದೆ. ತಿಂಗಳುಗಟ್ಟಲೆ ನಡೆದ ತನಿಖೆಯ ನಡುವೆ, ಇದೀಗ ರಾಜ್ಯ ಮಹಿಳಾ ಆಯೋಗವೂ ಈ ಪ್ರಕರಣದ ಕುರಿತು ಅಧಿಕೃತವಾಗಿ ಹಸ್ತಕ್ಷೇಪ ಮಾಡಿದೆ.
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಎಸ್‌ಐಟಿ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ, ಧರ್ಮಸ್ಥಳದಲ್ಲಿ ಕಳೆದ ಎರಡು ದಶಕಗಳಿಂದ ನಡೆದಿವೆ ಎನ್ನಲಾಗಿರುವ ಅತ್ಯಾಚಾರ, ಕೊಲೆ, ಅಸಹಜ ಸಾವು ಮತ್ತು ನಾಪತ್ತೆ ಪ್ರಕರಣಗಳನ್ನೂ ಒಳಗೊಂಡಂತೆ ಸಮಗ್ರ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಹಿಂದಿನ ವರ್ಷ ಆಯೋಗವು ಇದೇ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎಸ್‌ಐಟಿ ರಚನೆಗೆ ಶಿಫಾರಸು ಮಾಡಿತ್ತು. ಸರ್ಕಾರದ ಆದೇಶವು ಕೇವಲ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 39/2025 (ಕಲಂ 211ಎ, ಬಿಎನ್‌ಎಸ್) ತನಿಖೆಗೆ ಸೀಮಿತವಾಗಿರದೆ, ಮಹಿಳೆಯರ ಹಿತದೃಷ್ಟಿಯಿಂದ ನಡೆದ ಎಲ್ಲ ಪ್ರಕರಣಗಳನ್ನೂ ಒಳಗೊಂಡಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿದೆ.
ಆದರೆ, ಆಯೋಗದ ಪ್ರಕಾರ, ಈವರೆಗೆ ಎಸ್‌ಐಟಿ ತನಿಖೆ ಮುಖ್ಯವಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಚಿನ್ನಯ್ಯ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ನಡೆದ ಉತ್ಖನನ ಕಾರ್ಯಾಚರಣೆಗೆ ಮಾತ್ರ ಸೀಮಿತವಾಗಿದೆ. ಅಸ್ಥಿಪಂಜರಗಳ ಪತ್ತೆ, ಅವುಗಳ ಗುರುತಿನ ಮಾಹಿತಿ ಹಾಗೂ ಸಾವುಗಳ ಹಿನ್ನೆಲೆ ಕುರಿತು ಇನ್ನೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಆಯೋಗವು ತನ್ನ ಪತ್ರದಲ್ಲಿ, ಎಸ್‌ಐಟಿ ತನಿಖೆ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ, ಹಾಗೂ ಅನುಮಾನಾಸ್ಪದ ಸಾವು ಪ್ರಕರಣಗಳ ತನಿಖೆಯನ್ನೂ ಒಳಗೊಂಡಿರಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ. ಈ ಕುರಿತು ಕೈಗೊಂಡಿರುವ ಅಥವಾ ಕೈಗೊಳ್ಳಲಿರುವ ಕ್ರಮಗಳ ವಿವರವನ್ನು ತಕ್ಷಣ ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ.

