
ಭಟ್ಕಳ: ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಟ್ಕಳದ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು.ರಾಜ್ಯೋತ್ಸವ ಮಾಸದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ‘ಸಾಧಕರೆಡೆಗೆ ಸಾಹಿತ್ಯ ಪರಿಷತ್ತು’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಭಟ್ಕಳ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ ನಾಯ್ಕ ಅವರನ್ನು ಪೊಲೀಸ್ ಠಾಣೆಯಲ್ಲಿ ಗೌರವಿಸಲಾಯಿತು. ಇದೇ ವೇಳೆ ಭಟ್ಕಳದ ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಅವರನ್ನು ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಲಾಯಿತು.

ಸಾಹಿತ್ಯದ ಓದು ಒತ್ತಡ ನಿವಾರಣೆಗೆ ಸಹಕಾರಿ: ನವೀನ ನಾಯ್ಕ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊಲೀಸ್ ಉಪನಿರೀಕ್ಷಕ ನವೀನ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಸಾಧನೆಯನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.ಪೊಲೀಸ್ ಇಲಾಖೆಯ ಒತ್ತಡದ ಕರ್ತವ್ಯಗಳ ನಡುವೆಯೂ ಸಾಹಿತ್ಯ ಓದುವುದು ಜ್ಞಾನವೃದ್ಧಿಗೆ ನೆರವಾಗುವುದರ ಜತೆಗೆ ಮಾನಸಿಕ ನೆಮ್ಮದಿ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಇನ್ನಷ್ಟು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಓದು ವೈಚಾರಿಕತೆ ಮತ್ತು ಕಲ್ಪನಾಶಕ್ತಿಯನ್ನು ಬೆಳೆಸುತ್ತದೆ: ವಸಂತ ಭಟ್
ಸನ್ಮಾನ ಸ್ವೀಕರಿಸಿದ ಮಾತಾ ಗ್ರಂಥಾಲಯದ ಗ್ರಂಥಪಾಲಕ ವಸಂತ ಭಟ್ ಮಾತನಾಡಿ, ಪುಸ್ತಕಗಳ ಓದು ವ್ಯಕ್ತಿಯಲ್ಲಿ ಕಲ್ಪನಾಶಕ್ತಿ ಹಾಗೂ ವೈಚಾರಿಕ ಚಿಂತನೆಯನ್ನು ಬೆಳೆಸುವ ಮಹತ್ವದ ಸಾಧನವಾಗಿದೆ ಎಂದರು.ಸಾಹಿತ್ಯ ಪರಿಷತ್ತು ತಮ್ಮನ್ನು ಗುರುತಿಸಿ, ಅನಿರೀಕ್ಷಿತವಾಗಿ ಗೌರವಿಸಿರುವುದು ಅತ್ಯಂತ ಸಂತೋಷದ ಕ್ಷಣವಾಗಿದೆ. ಈ ಗೌರವಕ್ಕೆ ಸದಾ ಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಾಧಕರ ಸೇವೆ ಭಟ್ಕಳದ ಹೆಮ್ಮೆ: ಗಂಗಾಧರ ನಾಯ್ಕ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಸಮಾಜವನ್ನು ಸಂಸ್ಕಾರಯುತವಾಗಿ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿ ಸಮಾಜದ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿರುವ ನವೀನ ನಾಯ್ಕ ಅವರ ಸಾಧನೆ ಪೊಲೀಸ್ ಇಲಾಖೆಗೆ ಮಾತ್ರವಲ್ಲದೆ ಭಟ್ಕಳಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಟ್ಕಳದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಆಶಯದೊಂದಿಗೆ ಮಾತಾ ಗ್ರಂಥಾಲಯವನ್ನು ಸ್ಥಾಪಿಸಿ, ಸಾಹಿತ್ಯಾಸಕ್ತರು ಹಾಗೂ ಓದುಗರಿಗೆ ಪುಸ್ತಕಗಳ ಪರಿಚಯ ಮಾಡಿಕೊಡುತ್ತಿರುವ ವಸಂತ ಭಟ್ ಅವರ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ತೆಲುಗಿನ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ ವಸಂತ ಭಟ್ ಅವರಿಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಮಾನಾಸುತ ಶಂಭು ಹೆಗಡೆ ಅವರು ತಮ್ಮ ಕವಿತೆಯ ಮೂಲಕ ಇಬ್ಬರೂ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ., ಪಿಎಸ್ಐ ತಿಮ್ಮಪ್ಪ, ರವಿ ಗಾಂಜೆಕರ್, ಪ್ರೊಬೆಷನರಿ ಪಿಎಸ್ಐ ಬಸವರಾಜ್, ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಯಲ್ವಡಿಕವೂರು, ಶ್ರೀಧರ್ ತಾಂಡೆಲ್, ಮಲ್ಲಿಕಾರ್ಜುನ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಪಿ. ಬಂಡಾರಿ, ಪೂರ್ಣಿಮಾ ಕರ್ಕಿಕರ್, ದೀಪಕ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಾಹಿತಿ ಹಾಗೂ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
