
ಶಿರಸಿ-ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲನಿಯನ್ನು ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ ಎಂದು ಘೋಷಿಸುವಂತೆ ಕೋರಿ ಮಾಜಿ ಶಾಸಕ ವಿ. ಎಸ್. ಪಾಟೀಲ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಶಿರಸಿ ಅವರ ನೇತೃತ್ವದ ನಿಯೋಗವು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿತು.

ಮನವಿಯಲ್ಲಿ, ಮಾಗೋಡಿನಲ್ಲಿ 300 ಎಕರೆಗಿಂತ ಹೆಚ್ಚಿನ ನಿರ್ಜನ ಭೂಮಿ ಲಭ್ಯವಿದ್ದು, ಇದು ಮೂಲತಃ ಬೇಡ್ತಿ ಯೋಜನೆಗಾಗಿ ಕೆಪಿಸಿಗೆ ನಿರ್ಮಾಣಗೊಂಡು ಈಗ ಸಂಪೂರ್ಣವಾಗಿ ಹಾಳಾಗಿದೆ. ಈ ಜಾಗವನ್ನು ಅರಣ್ಯ ಇಲಾಖೆಯಿಂದ ಮರಳಿ ಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮುಖಾಂತರ ಟೆಕ್ ಪಾರ್ಕ್ ಅಥವಾ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಿದರೆ, ಸ್ಥಳೀಯ ಯುವಕರ ವಲಸೆ ತಡೆಯಲು ಸಾಧ್ಯವೆಂದು ತಿಳಿಸಲಾಗಿದೆ.

ಮಾಗೋಡು ಕಾಲನಿಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 75 ಕಿ.ಮೀ ದೂರದಲ್ಲಿದ್ದು, ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ, ಅಂಕೋಲಾ–ಗುತ್ತಿ ರಾಷ್ಟ್ರೀಯ ಹೆದ್ದಾರಿ 53 ಹಾಗೂ ಯಲ್ಲಾಪುರ–ಶಿರಸಿ–ಭಟ್ಕಳ ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲಿರುವುದರಿಂದ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಇದರ ಹವಾಮಾನವೂ ಊಟಿ, ಕೊಡೈಕನಾಲ್, ಡೆಹ್ರಾಡೂನ್ ಪ್ರದೇಶಗಳಂತೆ ಸುಂದರ ಮತ್ತು ಅನುಕೂಲಕರವಾಗಿದೆ.
ಉತ್ತರ ಕನ್ನಡ ಜಿಲ್ಲೆ ಅಡಿಕೆ, ಮತ್ಸ್ಯೋದ್ಯಮ, ಕಾಳುಮೆಣಸು, ಶುಂಠಿ ಮೊದಲಾದ ಬೆಳೆಯ ಮೂಲಕ ರಾಜ್ಯಕ್ಕೆ ನೂರಾರು ಕೋಟಿ ರೂಪಾಯಿ ತೆರಿಗೆಯನ್ನು ನೀಡುತ್ತಿರುವುದರೂ, ಜಿಲ್ಲೆಗೆ ಉಭಯ ಸರ್ಕಾರಗಳಿಂದ ವಿಶ್ವವಿದ್ಯಾನಿಲಯ, ಸಂಶೋಧನಾಲಯ, ಉತ್ತಮ ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳು ಲಭಿಸದಿರುವುದು ದುಃಖದಾಯಕವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಮಾಗೋಡನ್ನು ವಿಶೇಷ ಆರ್ಥಿಕ ವಲಯ ಅಥವಾ ವಿಶೇಷ ಕೈಗಾರಿಕಾ ಪ್ರದೇಶವಾಗಿ ಘೋಷಿಸಿ, ರಾಜ್ಯದ ಅಂತರರಾಷ್ಟ್ರೀಯ ಟೆಕ್ ಸಮ್ಮಿಟ್‌ನಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸಾಫ್ಟ್‌ವೇರ್ ಪಾರ್ಕ್ ನಿರ್ಮಿಸಲು ಅವಕಾಶ ಕಲ್ಪಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಗಣೇಶ್ ಹೆಗಡೆ, ರಮೇಶ್ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ್, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್, ಕೆ.ಟಿ. ಹೆಗಡೆ ಉಪಸ್ಥಿತರಿದ್ದರು.

