ಪರಸ್ಪರ ಮುಖ ನೋಡದೆ ಯುವತಿ
ಫೇಸ್ಬುಕ್ ಡಿಪಿ ನೋಡಿ ಮರುಳಾಗಿ , ಹನಿಟ್ರ್ಯಾಪ್ ಗೆ ಒಳಗಾಗಿ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಪಾಪರ್ ಆದ ಯುವಕ
ವಿಜಯಪುರ -ಈಗಿನ ದಿನಗಳಲ್ಲಿ ತೀರಾ ಆಪ್ತರೇ ಹಣ ಕೇಳಿದಾಗ ಕೊಡಲು ಹೆಚ್ಚಿನ ಮಂದಿ ಹಿಂದೆ ಮುಂದೆ ನೋಡ್ತಾರೆ. ಆದರೆ ವಿಜಯಪುರದಲ್ಲೊಬ್ಬ ಆಸಾಮಿ ಫೇಸ್ಬುಕ್ ಡ್ ಡಿಪಿ ನೋಡಿ ಮರುಳಾಗಿ ಬರೋಬ್ಬರಿ 40 ಲಕ್ಷ ರೂ. ಕಳೆದುಕೊಂಡಿದ್ದಾನೆ. ಕೊನೆಗೆ ಆದದ್ದು ಆಗಲಿ ಅಂತ ಯುವಕ ನ್ಯಾಯ ಕೇಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಈ ಬೆನ್ನಲ್ಲೇ ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ವಿಜಯಪುರದ ಬಗಲೂರು ಗ್ರಾಮದ ಯುವಕ ಪರಮೇಶ್ ಹಿಪ್ಪರಗಿ ಎಂಬಾತ ಹನಿಟ್ರ್ಯಾಪ್ ಗೆ ಒಳಗಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಈತ ಹೈದರಾಬಾದ್ ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿ ಕೆಲಸ ಮಾಡಿ ತಿಂಗಳಿಗೆ 30 ಸಾವಿರ ರೂ. ಸಂಪಾದಿಸುತ್ತಿದ್ದ. ಈತನಿಗೆ ಫೇಸ್ ಬುಕ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ಆಕೆಯ ತುಂಬಾ ಸುಂದರವಾದ ಪ್ರೊಫೈಲ್ ಫೋಟೋ ನೋಡಿಯೇ ಆತ ಅವಳ ಪ್ರೀತಿಗೆ ಶರಣಾಗಿದ್ದ. ಹಗಲು ರಾತ್ರಿ ಆಕೆಗೆ ಮೆಸೇಜ್ ಕಳಿಸುತ್ತಿದ್ದ. ಆಕೆ ಆತನ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡು ಸುಳ್ಳುಗಳ ಕಂತೆಯನ್ನೇ ಸೃಷ್ಟಿಸಿದ್ದಾಳೆ. ತಾನು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಅದಕ್ಕಾಗಿ ಹಣದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತಾನು ಜಿಲ್ಲಾಧಿಕಾರಿ ಆಗುತ್ತೇನೆ. ಆದರೆ ಅದಕ್ಕೆಲ್ಲಾ ಹಣ ಬೇಕು ಎಂದೆಲ್ಲಾ ಹೇಳಿ ಪರಮೇಶ್ ನನ್ನು ನಂಬಿಸಿದ್ದಾಳೆ.
ಆಕೆಯ ಜಾಲದಲ್ಲಿ ಸುಲಭವಾಗಿ ಸಿಕ್ಕಿಬಿದ್ದಿದ್ದ ಆತ ಆಕೆ ಕೇಳಿದಾಗೆಲ್ಲಾ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ನಗದು ಹಣ, ಒಂದು ಫ್ಲ್ಯಾಟ್ ಎಲ್ಲವನ್ನೂ ಮಾರಿ ಹಣ ಕಳಿಸಿದ್ದ. ಯುವಕನಿಂದ ಹಣ ಬರುತ್ತಿದೆ ಎಂದು ಗೊತ್ತಾದ ಮೇಲೆ ಆಕೆ ಹೊಸ ಹೊಸ ಐಡಿಯಾಗಳನ್ನು ಹುಡುಕಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ಆತನಿಗೆ ವಿಡಿಯೋ ಕಾಲ್ ಮಾಡಿ ಆತನ ಬೆತ್ತಲೆ ವಿಡಿಯೋ ಮಾಡಿಕೊಂಡು ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದಳು. ಆಕೆಯ ಪತಿ ಕೂಡಾ ಈ ಮೋಸದಾಟಕ್ಕೆ ಸಾಥ್ ನೀಡಿದ್ದಾನೆ. ಕೊನೆಗೂ ಆಕೆಯ ವಂಚನೆ ಅರಿತ ಪರಮೇಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್ಪಿ ಆನಂದ್ ಕುಮಾರ್ ವಿಶೇಷ ತಂಡವೊಂದನ್ನು ರಚಿಸಿದ್ದರು. ತನಿಖೆ ವೇಳೆ ಮಹಿಳೆ ಹಾಸನ ಮೂಲದ ಮಂಜುಳಾ ಎಂದು ತಿಳಿದುಬಂದಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಸನದ ಚನ್ನರಾಯಪಟ್ಟಣದ ದಾಸರಹಳ್ಳಿ ಗ್ರಾಮದಲ್ಲಿ ವಂಚಕಿಯನ್ನು ಬಂಧಿಸಿದ್ದಾರೆ. ಪೊಲೀಸರ ದಾಳಿ ವೇಳೆ ವಂಚಕಿ ಮಂಜುಳಾ ಪತಿ ಎಸ್ಕೇಪ್ ಆಗಿದ್ದಾನೆ. ಸದ್ಯ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇನ್ನು ಪರಮೇಶ್ ನಿಂದ ಪಡೆದ ಹಣದಲ್ಲಿ ಮಹಿಳೆ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರು, ಬೈಕ್ ಖರೀದಿಸಿದ್ದಾಳೆ ಅಲ್ಲದೇ ಊರಿನಲ್ಲಿ ಮನೆಯನ್ನು ಕೂಡಾ ಕಟ್ಟುತ್ತಿದ್ದಾಳೆ ಎಂದು ತಿಳಿದುಬಂದಿದೆ.