ಕುಂದಾಪುರ : ಮೊಬೈಲ್ ಅಂಗಡಿ ಕಳವು ಆರೋಪಿ ಕಳೆದ ತಿಂಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿ ಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
ಮುಹಮ್ಮದ್ ರಾಹೀಕ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮುಹಮ್ಮದ್ ರಾಹೀಕ್ ಕುಂದಾಪುರ ನಗರ ಠಾಣೆ ವ್ಯಾಪ್ತಿಯ ಬೀಜಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಕುಂದಾಪುರ ಪೊಲೀಸರು ಅ.19ರಂದು ಬಂಧಿಸಿದ್ದರು.
ಮುಹಮ್ಮದ್ ರಾಹೀಕ್ಅ .20 ರಂದು ಕುಂದಾಪುರದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಹೆಡ್ಕಾನ್ಸ್ಟೇಬಲ್ ಮಂಜುನಾಥ್ ಹಾಗೂ ಸಿಬ್ಬಂದಿ ಬಸನಗೌಡ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕುಂದಾಪುರದಿಂದ ಹೊರಟು ರಾತ್ರಿ 8.25ಕ್ಕೆ ಹಿರಿಯಡ್ಕ ಅಂಜಾರು ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿದ್ದರು. ಜೈಲಿನ ಮುಖ್ಯ ದ್ವಾರದ ಬಳಿ ಜೀಪಿನಿಂದ ಇಳಿಯುವಾಗ ಈತ ಪೊಲೀಸರನ್ನು ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಪರಾರಿಯಾಗಿದ್ದನು.
ಹಿರಿಯಡ್ಕ ಠಾಣೆಯಲ್ಲಿ ಅ.ಕ್ರ. 66/2022 ಕಲಂ 353 224 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯ ತಲಾಶೆ ಬಗ್ಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ ಎಂ.ಹೆಚ್.ಐ.ಪಿ.ಎಸ್. ರವರ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ.ಸಿದ್ದಲಿಂಗಪ್ಪ ಮತ್ತು ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ್.ಕೆ. ಕುಂದಾಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ರವರ ಮುಂದಾಳತ್ವದಲ್ಲಿ, ಕುಂದಾಪುರ ಪಿ.ಎಸ್.ಐ. ಸದಾಶಿವ ಗವರೋಜಿ ಮತ್ತು ಪಿ.ಎಸ್.ಐ. ಪ್ರಸಾದ್ ಕೆ.ರವರ ನೇತೃತ್ವದಲ್ಲಿ 2 ತಂಡಗಳನ್ನು ರಚಿಸಿ ವಿಶೇಷ ಕರ್ತವ್ಯಕ್ಕೆ ನೇಮಿಸಿ ಕಳುಹಿಸಲಾಗಿತ್ತು. ಪಿ.ಎಸ್.ಐ. ಪ್ರಸಾದ್ ಕೆ. ರವರ ನೇತೃತ್ವದ ತಂಡವು ಆರೋಪಿ ರಾಹೀಕ್ ನನ್ನು ನ. 5 ರಂದು ಮುಂಬಯಿಯ ಮಾಂಡೋವಿಯಲ್ಲಿ ವಶಕ್ಕೆ ಪಡೆದುಕೊಂಡು ನ. 6ರಂದು ಕುಂದಾಪುರಕ್ಕೆ ಕರೆತಂದಿದ್ದು, ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.