ಭಯೋತ್ಪಾದನೆ ಕೃತ್ಯಕ್ಕೆ ಸಂಚಿನ ಆರೋಪದಲ್ಲಿ ಬಂಧಿತ ಭಟ್ಕಳದ ಅಬ್ದುಲ್ ವಾಹಿದ್ ಗೆ ಆರೋಪ ಸಾಬೀತಾಗದ ಹಿನ್ನೆಲೆ 7 ವರ್ಷಗಳ ಬಳಿಕ ಬಿಡುಗಡೆಗೆ ಆದೇಶ
ಭಟ್ಕಳ:ಬಾಂಬ್ ಸ್ಫೋಟಕ್ಕೆ ಸಂಚಿನ ಆರೋಪದಲ್ಲಿ ಬಂಧಿತ ಯುವಕನನ್ನು ಇದೀಗ 7 ವರ್ಷಗಳ ಬಳಿಕ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ದೆಹಲಿ ನ್ಯಾಯಾಲಯ ಬಿಡುಗಡೆಗೆ ಆದೇಶ ನೀಡಿದೆ.
ಭಟ್ಕಳದ ಅಬ್ದುಲ್ ವಾಹಿದ್ ಎಂಬವರನ್ನು ಬಿಡುಗಡೆಗೆ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ಹೊರಡಿಸಿದೆ.
ವಾಹಿದ್ ಗೆ 2007ರಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು, ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ 2016ರಲ್ಲಿ ಬಂಧಿಸಲಾಗಿತ್ತು.
ಇದಲ್ಲದೆ ಇಂಡಿಯನ್ ಮುಜಾಹಿದ್ದೀನ್‌ಗೆ ಯುವಕರನ್ನು ಸೇರುವಂತೆ ಮನವೊಲಿಸುತ್ತಿದ್ದನು ಎನ್ನುವ ಆರೋಪ ಇವರ ಮೇಲಿತ್ತು. ಭಾರತದಲ್ಲಿ ಭಯೋತ್ಪದನಾ ಚಟುವಟಿಕೆಗಳನ್ನು ನಡೆಸಲು ದುಬೈಯಲ್ಲಿ ಹಣ ಸಂಗ್ರಹ ಮಾಡಿದ್ದಾನೆ ಎನ್ನುವ ಆರೋಪ ಕೂಡಾ ಹೊರಿಸಲಾಗಿತ್ತು. ಈ ಕುರಿತು ವಿಚಾರಣೆಯನ್ನು ನಡೆಸಿದ ದೆಹಲಿಯ ಪಾಟಿಯಾಲಾ ಹೌಸ್ ಸೆಷನ್ಸ್ ಕೋರ್ಟ್ ಈತನ ಮೇಲಿನ ಆರೋಪಗಳು ಸಾಬೀತಾಗದ ಕಾರಣ ಈತನನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಲಾಗಿದೆ.
ತನ್ನ ಕಕ್ಷಿದಾರ ನಿರಪರಾಧಿ ಮತ್ತು ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾನೆ ಎನ್ನುವುದು ತಿಳಿದಿತ್ತು. ಈಗ ಆತ ನಿರಪರಾಧಿ ಎಂದು ಸಾಬೀತಾಗಿದೆ.ಎಂದು ಅಬ್ದುಲ್ ವಾಹಿದ್ ಪರ ವಕೀಲ ಎಂ.ಎಸ್.ಖಾನ್ ಹೇಳಿದ್ದಾರೆ