ಉಡುಪಿ: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ. ಅಲ್ಲದೇ ಹಲವಾರು ಜನರಿಗೆ ಲೋನ್ ಕೊಡಿಸುವುದಾಗಿ ಮಹಿಳೆ ಕೋಟಿ ಕೋಟಿ ರೂ. ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ.
ಉಡುಪಿ ನಿವಾಸಿ ತಬುಸುಮ್ ತಾಜ್ (40) ಎಂಬಾಕೆ ಇದುವರೆಗೂ 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ. ಮದುವೆಯಾಗಿ ಹೆಂಡತಿಯಿಂದ ಅಂತರ ಕಾಯ್ದುಕೊಂಡ ಹಣಹೊಂದಿರುವ ಗಂಡಸರನ್ನೇ ಈಕೆ ಟಾರ್ಗೆಟ್ ಮಾಡುತ್ತಿದ್ದಳು.
ಹೀನಾ ಎಂಟರ್ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಿಸುತ್ತೇನೆ ಎಂದು ಕಚೇರಿ ಮಾಡಿಕೊಂಡಿದ್ದಳು. 18 ವರ್ಷದಿಂದ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಳು. ಅಲ್ಲದೇ ಯು.ಟಿ. ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನ ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿದ್ದಳು.1 ಕೋಟಿ ರೂ. ಲೋನ್ ಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್ ಕೊಡಲಾಗುತ್ತೆ ಎಂದು ಭರವಸೆ ನೀಡಿ ವಂಚನೆ ಮಾಡುತ್ತಿದ್ದಳು.ರಾಜ್ಯದಾದ್ಯಂತ 38 ಕೋಟಿ ರೂ.ಗೂ ಅಧಿಕ ಹಣವನ್ನು ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳು.
ಅಲ್ಲದೇ ಚೆಕ್ ಬರೆಸಿಕೊಂಡು ಚೆಕ್ ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆಯನ್ನು ಹಾಕಿದ್ದಳು ಎಂದು ತಿಳಿದು ಬಂದಿದೆ. ಈಕೆಯ ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಮಹಿಳೆಯನ್ನು ಪ್ರಶ್ನಿಸಿದ್ದು, ಆತನ ಮೇಲೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ. ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.