ಗಂಡನಿಗೆ ಡೈವೋರ್ಸ್ ಕೊಟ್ಟು
ತನ್ನ ಜೊತೆ ಬಂದ ಪ್ರೇಯಸಿಯನ್ನೇ ಕೊಂದು ಗದ್ದೆಯಲ್ಲಿ ಹೂತು ಹಾಕಿದ ಪ್ರಿಯಕರ
ಹೊಳೆನರಸೀಪುರ-ಮದುವೆ ಆಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿ ಕಬ್ಬಿನಗದ್ದೆಯಲ್ಲಿ ಹೂತಿರುವ ಪ್ರಕರಣವನ್ನು ಹೊಳೆನರಸೀಪುರ ಪೊಲೀಸರು ಭೇದಿಸಿದ್ದಾರೆ.
ತಹಶೀಲ್ದಾರ್ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸಮೀಪದ ಮುದ್ದಲಾ ಪುರದ ಬಿಬಿಎಂ ಪದವೀಧರೆ ಕಾವ್ಯಾ (29) ಕೊಲೆಯಾದ ಮಹಿಳೆ. ಪರಸನಹಳ್ಳಿಯ ಅವಿನಾಶ್ ಬಂಧಿತ ಆರೋಪಿ.
ಮೃತ ಮಹಿಳೆಗೆ ಅಕ್ಷಯ್ ಎಂಬಾತನ ಜೊತೆಗೆ ಮೊದಲನೇ ವಿವಾಹವಾಗಿದ್ದು, ಆತನಿಂದ ವಿಚ್ಛೇದನ ಪಡೆದಿದ್ದರು. ನಂತರ ಅವಿವಾಹಿತನಾಗಿದ್ದ ಅವಿನಾಶ್‌ನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹವಾಗದಿದ್ದರೂ ಒಂದೇ ಕಡೆ ವಾಸವಿದ್ದರು. ಅವಿನಾಶ್ ಜೊತೆಯಲ್ಲಿದ್ದಾಗ ಪಿಜಿಯಲ್ಲಿ ಇರುವುದಾಗಿ ಕಾವ್ಯಾ ಪೋಷಕರಿಗೆ ತಿಳಿಸಿದ್ದರು. ಆದರೆ, ನವೆಂಬರ್ 25ರಿಂದ ಕರೆ ಮಾಡದ ಕಾರಣ ಅನುಮಾನಗೊಂಡ ಪೋಷ ಕರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದಾಗ ಮಹಿಳೆಯನ್ನು 15 ದಿನದ ಹಿಂದೆಯೇ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಮಂಗಳವಾರ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಪ್ರದೀಪ್, ನಗರಠಾಣೆ ಎಸ್.ಐ. ಅರಣ್ ಕುಮಾರ್ ಶವವನ್ನು ಹೊರಕ್ಕೆ ತೆಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.