ಭಟ್ಕಳದ ಬೈಪಾಸ್ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ – ಓರ್ವ ಮಹಿಳೆ ಸಾವು
ಭಟ್ಕಳ- ಭಟ್ಕಳ ನಗರದ ಬೈಪಾಸ್ ಬ್ರಿಡ್ಜ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
ರೀಟಾ ಡಿಸೋಜಾ (38) ಮೃತ ಮಹಿಳೆಯಾಗಿದ್ದು, ಜೇವಿಯರ್ ರಾಜ್ ಡಿಸೋಜಾ ಮತ್ತು ಪುತ್ರಿ ಇನ್ರಿಕಾ ಎಂಬುವವರು ಗಾಯಗೊಂಡಿದ್ದಾರೆ. ಉಡುಪಿಯಿಂದ ಗೋವಾ ಕಡೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದು, ಮೃತ ಮಹಿಳೆಯ ಪತಿ ಹಾಗೂ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ , ತನಿಖೆ ನಡೆಸುತ್ತಿದ್ದಾರೆ.