ಲಾರಿ ಹರಿದು ಸರ್ಕಾರಿ ಶಾಲೆ ಶಿಕ್ಷಕ ಉಮೇಶ್ ಸಾವು
ಕಾರವಾರ- ಬೈಕ್‌ನಿಂದ ಸ್ಕಿಡ್ ಆಗಿ ಕೆಳಗೆ ಬಿದ್ದ ಶಿಕ್ಷಕನ ಮೇಲೆ ಲಾರಿ ಹರಿದು ಮೃತಪಟ್ಟಿರುವ ದಾರುಣ ಘಟನೆ ಉತ್ತರಕನ್ನಡದ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ.
ಅಪಘಾತದಿಂದ ಮೃತಪಟ್ಟ ದುರ್ದೈವಿ ಶಿಕ್ಷಕ ಉಮೇಶ ಗುನಗಿ (50) ಎಂದು ಗುರುತಿಸಲಾಗಿದೆ.
ಶಿಕ್ಷಕ ಉಮೇಶ ಕಾರವಾರದಿಂದ ದೇವಳಮಕ್ಕಿ ಶಾಲೆಗೆ ತೆರಳುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಎದುರಿಗೆ ಬಂದ ಲಾರಿಯು ಶಿಕ್ಷಕ ಉಮೇಶ ಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಉಮೇಶ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅವೈಜ್ಞಾನಿಕ ರಸ್ತೆಯಿಂದ ಹಲವರ ಜೀವ ಕಸಿಯುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತ ಅಪಘಾತದಿಂದಾಗಿ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು.