ಮರಳು ಮಾಫಿಯಾ ಜೊತೆ ಶಾಮೀಲು-ಕಂಕನಾಡಿ ನಗರ ಠಾಣೆ ಭ್ರಷ್ಟ ಇನ್ಸ್ ಪೆಕ್ಟರ್ ಭಜಂತ್ರಿ ಅಮಾನತು
ಮಂಗಳೂರು : ಮರಳು ಮಾಫಿಯಾದ ಜೊತೆ ಶಾಮೀಲು ಹಾಗೂ ಮೇಲಾಧಿಕಾರಿಗಳ ಜೊತೆ ಉಡಾಫೆಯ ವರ್ತನೆ ಆರೋಪದಲ್ಲಿ ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿರುವ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ತಲಪಾಡಿ ಗ್ರಾಪಂ ಸದಸ್ಯನಿಗೆ ಸೇರಿದ್ದೆನ್ನಲಾದ ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದಲ್ಲದೇ ಮೇಲಾಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ.
ಮರಳು ಮಾಫಿಯ ನಡೆಸುವವರ ಜೊತೆ ಶಾಮೀಲಾಗಿರುವುದು ಮತ್ತು ತನ್ನೊಂದಿಗೆ ಉಡಾಫೆಯಾಗಿ ವರ್ತಿಸಿದ ಬಗ್ಗೆ ಎಸಿಪಿ ಧನ್ಯಾ ನಾಯಕ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ವರದಿ ನೀಡಿದ್ದರು. ಅಷ್ಟು ಮಾತ್ರವಲ್ಲದೆ ಇತ್ತೀಚೆಗೆ ಭಜಂತ್ರಿ ಅವರ ನಿವಾಸದ ಸ್ಥಳೀಯರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ತಮ್ಮೊಂದಿಗೆ ದರ್ಪ ತೋರುತ್ತಿದ್ದಾರೆಂದು ಹೇಳಿದ್ದರಂತೆ. ಈ ಬಗ್ಗೆ ಕಮಿಷನರ್ ಪ್ರಶ್ನೆ ಮಾಡಿದಾಗ, ನಾವು ಬದುಕೋದು ಹೇಗೆ ಸ್ವಾಮಿ ಎಂದು ಅವರೊಂದಿಗೂ ಸೋಗಿನ ಮಾತುಗಳನ್ನಾಡಿದ್ದರು ಎಂದು ಹೇಳಲಾಗಿದೆ. ಭಜಂತ್ರಿ ಈ ಹಿಂದೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿದ್ದಾಗಲೂ ಮೇಲಧಿಕಾರಿಗಳ ಉಡಾಫೆಯಿಂದ ವರ್ತಿಸಿ ಸಸ್ಪೆಂಡ್ ಆಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿರುವ ಎಸ್.ಎಚ್. ಭಜಂತ್ರಿ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.