ಉಡುಪಿ- ಉಡುಪಿ ಜಿಲ್ಲೆಯ ಕೋಟಸಮೀಪ ಪತಿ, ಪತ್ನಿ ಜಗಳವಾಡಿಕೊಂಡು ಗಲಾಟೆ ತಾರಕಕ್ಕೇರಿದ್ದಲ್ಲದೇ ಪತಿ ಪತ್ನಿಗೆ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ ಘಟನೆ ಇಂದು ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಪಡುಹೋಳಿ ಎಂಬಲ್ಲಿ ನಡೆದಿದೆ. ಸಾವನ್ನಪ್ಪಿದ ಮಹಿಳೆ ಕಿರಣ್ ಪತ್ನಿ ಬೀದರ್ ಮೂಲದ ಜಯಶ್ರೀ (34) ಎಂದು ತಿಳಿಯಲಾಗಿದೆ ಈ ಘಟನೆಯಲ್ಲಿ ಹಲ್ಲೆ ನಡೆಸಿದ್ದಾನೆನ್ನಲಾದ ಆರೋಪಿ ಪತಿಯನ್ನು ಬ್ರಹ್ಮಾವರ ತಾಲೂಕು ಸಾಸ್ತಾನ ಗುಂಡ್ಮಿ ನಿವಾಸಿ ಶ್ಯಾಮ್ ಉಪಾಧ್ಯಾಯ ಎಂಬುವರ ಪುತ್ರ ಕಿರಣ್ ಉಪಾಧ್ಯಾಯ (43) ಇವನನ್ನು ಬಂಧಿಸಲಾಗಿದೆ.
ಕಿರಣನ ಪತ್ನಿ ಜಯಶ್ರೀ ಇವರು ಮೂಲತ ಬೀದರ್ ಜಿಲ್ಲೆಯ ದಂಬಳಾಪುರದವರು. 9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಜಯಶ್ರೀ ಎಂಬುವರ ವಿವಾಹವಾಗಿತ್ತೆನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಕಾರ್ಕಡ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ಅಂಗನಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು.
ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ಚಟ ಇದ್ದು ಅಲ್ಲದೆ ಆನ್ಲೈನ್ ವ್ಯವಹಾರದಲ್ಲಿ ನಿರತರಾಗಿದ್ದು ಇದರಿಂದಾಗಿ ಪ್ರತೀ ದಿನ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಅದೇ ರೀತಿ ಗುರುವಾರ ರಾತ್ರಿ ಶುರುವಾಗಿದ್ದ ಜಗಳ ಶುಕ್ರವಾರ ಮುಂಜಾನೆ ತನಕ ನಡೆದು ಪತಿ ಕತ್ತಿಯಿಂದ ಪತ್ನಿಗೆ ಹಲ್ಲೆ ನಡೆಸಿದ್ದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ವಿಷಯ ತಿಳಿದ ತಕ್ಷಣ ಕಾರ್ಯಪ್ರವರ್ತರಾದ ಕೋಟ ಪೊಲೀಸ್ ಠಾಣಾ ಎಸ್ಐ ಸುಧಾ ಪ್ರಭು, ಎಎಸ್ಐ ಜಯಪ್ರಕಾಶ್, ಎಎಸ್ಐ ಗೋಪಾಲ್ ಪೂಜಾರಿ ಹಾಗೂ ಸಿಬ್ಬಂದಿ ರಾಘವೇಂದ್ರ ಗಾಣಿಗ ಇವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜಯಶ್ರೀ ಮೃತ ದೇಹವನ್ನು ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್ ಪಿ ಎಂ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲಿಸಿ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.