ತನ್ನ ಒಳ ಉಡುಪಿನಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಯುವತಿಯ ಬಂಧನ
ಕಾಸರಗೋಡು-ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕಲ್ಲಿಕೋಟೆ ಕರಿಪ್ಪೂರು ವಿಮಾನ ನಿಲ್ದಾಣದಿಂದ ಪೊಲೀಸರು ವಶಪಡಿಸಿಕೊಂಡಿದ್ದು, ಕಾಸರಗೋಡು ನಿವಾಸಿಯಾದ 19 ವರ್ಷದ ಯುವತಿಯನ್ನು ಬಂಧಿಸಿದ್ದಾರೆ.
ಬಂಧಿತ ಯುವತಿಯನ್ನು ಕಾಸರಗೋಡಿನ ಶಹಲಾ (19) ಎಂದು ಗುರುತಿಸಲಾಗಿದೆ.
ಈಕೆಯಿಂದ 1.884 ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು, ಮೂರು ಪ್ಯಾಕೆಟ್ ಗಳನ್ನು ಮಾಡಿ ಒಳ ಉಡುಪುನಲ್ಲಿ ಬಚ್ಚಿಟ್ಟು ಚಿನ್ನಾಭರಣವನ್ನು ಸಾಗಾಟ ಮಾಡುತ್ತಿದ್ದಳು.
ಭಾನುವಾರ ರಾತ್ರಿ ದುಬಾಯಿಯಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಈಕೆ ಕಸ್ಟಮ್ಸ್ ತಪಾಸಣೆ ಬಳಿಕ ರಾತ್ರಿ 11 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಳು. ಆದರೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನಾಭರಣ ಸಾಗಾಟ ಪತ್ತೆಯಾಗಿದೆ. ಹಲವು ಸಮಯ ಯುವತಿಯನ್ನು ವಿಚಾರಣೆಗೊಳಪಡಿಸಿದರೂ ಸ್ಪಷ್ಟ ಉತ್ತರ ನೀಡಲಿಲ್ಲ. ಲಗೇಜ್ ತಪಾಸಣೆ ನಡೆಸಿದರೂ ಚಿನ್ನಾಭರಣ ಪತ್ತೆಯಾಗಲಿಲ್ಲ. ಕೊನೆಗೆ ದೇಹ ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಚಿನ್ನಾಭರಣ ಪತ್ತೆಯಾಗಿದೆ.
ಇನ್ನು ಯುವತಿಯಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.