ಯುವಕನ ವಯಸು 26 – ಆ ಯುವಕ ಒಟ್ಟು ಆದದ್ದು 21 ಮದುವೆ
ತಮಿಳುನಾಡು- 26ನೇ ವಯಸ್ಸಿನ ಯುವಕ ಬರೋಬ್ಬರಿ 21 ಯುವತಿಯರನ್ನು ಮದುವೆಯಾದ ಘಟನೆ ನಡೆದಿದ್ದು, ಆತ ಹೇಗೆ ಮದುವೆಯಾದ ಎಂಬುದು ಇದೀಗ ಭಾರಿ ಚರ್ಚೆಯಾಗುತ್ತಿದೆ.
21 ಮದುವೆಯಾದ ಆಸಾಮಿಯ ಹೆಸರು ಕಾರ್ತಿಕ್ ರಾಜ. ಈತ ತಮಿಳುನಾಡಿನ ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದವನು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಈತ ರಾಣಿ ಎಂಬಾಕೆಯನ್ನು ಮದುವೆಯಾಗಿದ್ದ. ಈ ವರದಕ್ಷಿಣೆಯಾಗಿ ಐದು ಎಕರೆ ಭೂಮಿ, ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ರೂ. ನಗದು ಹಣವನ್ನು ಪಡೆದಿದ್ದನು. ಆದರೆ ಅದೇನಾಯಿತು ಗೊತ್ತಿಲ್ಲ ಆತ ವರದಕ್ಷಿಣೆ ಹಣದೊಂದಿಗೆ ಪರಾರಿಯಾಗಿದ್ದ. ಈ ಕುರಿತು ರಾಣಿ ಮನೆಯವರು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕಾರ್ತಿಕ್ನನ್ನು ಪತ್ತೆ ಹಚ್ಚಿ ಬಂಧಿಸಿದರು. ವಿಚಾರಣೆ ವೇಳೆ ಆತ ಒಟ್ಟು 21 ಯುವತಿಯರನ್ನು ಮದುವೆಯಾಗಿದ್ದಾನೆಂದು ತಿಳಿದುಬಂದಿದೆ. ಆರೋಪಿ ಕಾರ್ತಿಕ್ ಹಣ ಸಂಪಾದನೆಗಾಗಿ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮದುವೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಒಳ್ಳೆಯ ಕೆಲಸದಲ್ಲಿದ್ದೇನೆ ಎಂದು ನಂಬಿಸಿ ತನ್ನ ಯೋಜನೆಯಂತೆ ಬೇರೆ ಬೇರೆ ಹೆಸರಿನ ಯುವತಿಯರನ್ನು ಮದುವೆಯಾಗುತ್ತಿದ್ದ. ಬಳಿಕ ಯಾವೊಬ್ಬ ಪತ್ನಿಯೊಂದಿಗೆ ಕನಿಷ್ಠ ಪಕ್ಷ 5 ತಿಂಗಳು ಆತ ಇರುತ್ತಿರಲಿಲ್ಲ. ಮದುವೆಯ ಬಳಿಕ ಎಲ್ಲ ಹಣವನ್ನು ತೆಗೆದುಕೊಂಡು ಆರೋಪಿ ಪರಾರಿಯಾಗುತ್ತಿದ್ದ. ಎಲ್ಲವೂ ಮುಗಿದ ಮೇಲೆ ಬೇರೆ ಊರಿಗೆ ಹೋಗಿ ಬೇರೆ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದ.
ಇದೀಗ ಆತನ 20 ಪತ್ನಿಯರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ತಿಕ್ ರಾಜಾ ಬಳಿ ಆಡಿ ಕಾರು ಮಾತ್ರ ಇದೆ, ಚಿನ್ನ ಅಥವಾ ನಗದು ಏನೂ ಇಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.