ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡ್ತಿದ್ದಾಳೆ ಎಂದು ಸಿಟ್ಟಿಗೆ ಕೊಲೆ ಮಾಡಿದ ಪತಿರಾಯ
ಚೆನ್ನೈ: ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡ್ತಿದ್ದಾಳೆ ಎಂದು ಆಕ್ರೋಶಗೊಂಡ ಪತಿಯೋರ್ವ ಪತ್ನಿಯನ್ನು ಶಾಲು ಹೊದಿಸಿ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ರ ಎಂಬ ಮಹಿಳೆ ಪತಿಯ ದುಷ್ಕೃತ್ಯಕ್ಕೆ ಬಲಿಯಾದವರಾಗಿದ್ದು, ಇವರು ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತಿ ಅಮೃತಲಿಂಗಂ(38) ಎಂಬಾತ ದುಷ್ಕೃತ್ಯ ನಡೆಸಿದ್ದಾನೆ. ಈ ಕೂಲಿ ಕಾರ್ಮಿಕನಾಗಿ ತೆನ್ನಂ ಪಾಳ್ಯಂ ತರಕಾರಿ ಮಾರುಕಟ್ಟೆಯಲ್ಲಿ ದುಡಿಯುತ್ತಿದ್ದ.
ಚಿತ್ರ ಟಿಕ್ ಟಾಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ರೀಲ್ಸ್ ಗಳನ್ನು ಮಾಡುವ ಹವ್ಯಾಸ ಹೊಂದಿದ್ದರು ಮತ್ತು ಇದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿ ದಂಪತಿ ನಡುವೆ ಹಲವಾರು ಬಾರಿ ಗಲಾಟೆಗಳು ನಡೆದಿದ್ದವು.
ಪತ್ನಿ ರೀಲ್ಸ್ ಗಳಲ್ಲಿ ಅಭಿನಯಿಸುವುದು ಮತ್ತು ಚಲನ ಚಿತ್ರಗಳಲ್ಲಿ ನಟಿಸಲು ಬಯಸುತ್ತಿರುವ ವರ್ತನೆ ಅಮೃತಾಲಿಂಗಂಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಪತ್ನಿಯ ವೈಯಕ್ತಿಕ ಸ್ವಾತಂತ್ರ್ಯದ ವಿರುದ್ಧ ಮನಸ್ಥಿತಿಯ ಅಮೃತಲಿಂಗಂ, ಪತ್ನಿಯ ಜೊತೆಗೆ ಇದೇ ವಿಚಾರಕ್ಕೆ ಜಗಳವಾಡಿದ್ದು, ತನ್ನ ವಾದ ನಡೆಯದೇ ಹೋದಾಗ ಆಕ್ರೋಶಗೊಂಡು ಈ ದುಷ್ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಅನ್ನೋದು ಬಹಳಷ್ಟು ಪ್ರಖ್ಯಾತಿಯನ್ನು ಗಳಿಸಿದೆ. ಸಾಕಷ್ಟು ಸಂಖ್ಯೆಯ ಜನರು ಇದರಿಂದಾಗಿ ಜನಪ್ರಿಯತೆ ಪಡೆದಿದ್ದಾರೆ. ಆದರೆ, ಇನ್ನೂ ಕೂಡ ಆಧುನಿಕತೆಗೆ, ಹೊಸ ತನಕ್ಕೆ ಒಗ್ಗಿಕೊಳ್ಳದ ಕೆಲವು ಜನರು ಆಗಾಗ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು, ವಿರೋಧಿಸುವುದನ್ನು ಕಾಣಬಹುದಾಗಿದೆ. ಇದೀಗ ಈ ರೀತಿಯ ಮನಸ್ಥಿತಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ