ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ 49 ವರ್ಷಗಳ ರಾಜಕೀಯ ಅನುಭವ ಇರುವ ಬಿ.ಕೆ.ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ನೀಡುವಂತೆ
ಕರ್ನಾಟಕ ರಾಜ್ಯ ಮುಸ್ಲಿಂ ಯೂನಿಟಿ ಆಗ್ರಹ
ಬೆಂಗಳೂರು:- ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾದ ಬಿ.ಕೆ.ಹರಿಪ್ರಸಾದ್ ಅವರು ತಮ್ಮ 49 ವರ್ಷಗಳ ರಾಜಕೀಯ ಜೀವನದಲ್ಲಿ ಅಲ್ಪಸಂಖ್ಯಾತರ ಪರ ಗಟ್ಟಿ ಧ್ವನಿಯಾಗಿ ನಿಂತಿರುವವರು. ಈ ವಿಚಾರದಲ್ಲಿ ಸ್ವಂತ ಲಾಭ- ನಷ್ಟದ ಲೆಕ್ಕಾಚಾರ ಹಾಕಿ ಯಾವತ್ತೂ ಮಾತನಾಡಿದವರಲ್ಲ. ರಾಜ್ಯವೇ ಇರಲಿ, ರಾಷ್ಟ್ರೀಯ ಮಟ್ಟದ ವಿಚಾರಗಳೇ ಇರಲಿ ಅಲ್ಪಸಂಖ್ಯಾತ ಸಮುದಾಯಗಳ ಹಿತರಕ್ಷಣೆಯ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಕೆಲವೇ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿ ನಿಂತವರೆಂದು ಕರ್ನಾಟಕ ರಾಜ್ಯ ಮುಸ್ಲಿಂ ಯೂನಿಟಿಯ ಕಾರ್ಯಾಧ್ಯಕ್ಷರಾದ ಎನ್.ಎ ಶೇಖ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿಚಾರದಲ್ಲಿ ಹರಿಪ್ರಸಾದ್ ಅವರಂತೆ ಗಟ್ಟಿಧ್ವನಿಯಲ್ಲಿ, ನೇರ ಮತ್ತು ನಿಷ್ಠೂರವಾಗಿ ಮಾತನಾಡುವವರು ವಿರಳ. ಪಕ್ಷ ಮತ್ತು ಸರ್ಕಾರಗಳಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನಮಾನಗಳನ್ನು ಕಲ್ಪಿಸುವ ವಿಚಾರದಲ್ಲಿ ಕೂಡ ಅವರು ಎಂದೂ ರಾಜಿಯಾದವರಲ್ಲ.
16 ವರ್ಷಗಳ ಕಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿ ಹುದ್ದೆಗಳಲ್ಲಿ ಇರುವಾಗ ಅಲ್ಪಸಂಖ್ಯಾತರ ಹಿತರಕ್ಷಣೆಗೆ ರಾಜಿ ಇಲ್ಲದೆ ದುಡಿದವರು ಹರಿಪ್ರಸಾದ್ ರವರು ಎಂದರೆ ತಪ್ಪಾಗಲಾರದು. ನಮ್ಮ ಕೆಎಂಯು ಘಟಕದಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಮಾರುಹೋಗದೆ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ನಮ್ಮಲ್ಲಿ ಇದ್ದಾರೆ. ನಮಗೆ ಪಕ್ಷ ಯಾವುದೇ ಆಗಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಹಾಯ ಮಾಡುತ್ತಾರೆಯೊ ಅವರ ಬೆನ್ನಹಿಂದೆ ನಿಲ್ಲುವ ಕೆಲಸ ನಮ್ಮದಾಗುತ್ತದೆ.
ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಅಪಾಯ ಎದುರಾದ ಎಲ್ಲ ಸಂದರ್ಭಗಳಲ್ಲೂ ಸಂಸತ್ತಿನಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡಿದ ಉದಾಹರಣೆ ಹರಿಪ್ರಸಾದ್ ರವರಲ್ಲಿದೆ.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಅಪಾಯ ಎದುರಾದಾಗ, ಸರ್ಕಾರವೇ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಕುಮ್ಮಕ್ಕು ಕೊಟ್ಟಿದ್ದಂತಹ ಸಂಕಷ್ಟದ ಕಾಲಘಟ್ಟದಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಗಟ್ಟಿಧ್ವನಿಯಲ್ಲಿ ವಿರೋಧ ಮಾಡಿದವರು ಹರಿಪ್ರಸಾದ್. ಈ ಅವಧಿಯಲ್ಲಿ ಹಿಜಾಬ್, ಹಲಾಲ್, ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರದ ನಡೆಯನ್ನು ನೇರಾನೇರ ವಿರೋಧಿಸಿದ ರಾಜಕಾರಣಿ ಅವರು. ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮತೀಯ ದ್ವೇಷದ ಕೊಲೆಗಳು, ಹಿಂಸಾಕೃತ್ಯಗಳು ನಡೆದಾಗ ಕಾಂಗ್ರೆಸ್ ಪಕ್ಷದ ಇತರ ನಾಯಕರು ಅಲ್ಪಸಂಖ್ಯಾತರಿಗೆ ಸಾಂತ್ವನ ಹೇಳಲು ಹಿಂದೇಟು ಹಾಕಿದ ಉದಾಹರಣೆಗಳಿವೆ. ಅಂತಹ ಸನ್ನಿವೇಶದಲ್ಲಿ ಕಿಂಚಿತ್ತೂ ಯೋಚಿಸದೆ ಅಲ್ಪಸಂಖ್ಯಾತರ ಮನೆ ಬಾಗಿಲಿಗೆ ಬಂದು ಧೈರ್ಯ ತುಂಬಿದವರು ಬಿ.ಕೆ.ಹರಿಪ್ರಸಾದ್. ಇಂತಹ ನೇರ, ನಿಷ್ಠರ ನಡೆಯ, ಜೀವನದುದ್ದಕ್ಕೂ ತಾನು ನಂಬಿದ ಸಿದ್ಧಾಂತದಲ್ಲಿ ಎಂದೂ ರಾಜಿಯಾಗದ ರಾಜಕೀಯ ನಾಯಕನನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟದಿಂದ ಹೊರಗಿಟ್ಟಿರುವುದು ನ್ಯಾಯ ಸಮ್ಮತವಲ್ಲ.
ಅಲ್ಪಸಂಖ್ಯಾತರ ಪರ ಗಟ್ಟಿ ಧ್ವನಿಯಾಗಿರುವ ಅವರು ಸಂಪುಟದಲ್ಲಿದ್ದರೆ ಅಲ್ಪಸಂಖ್ಯಾತರಿಗೆ ನಿಜವಾಗಿ ನ್ಯಾಯ ದೊರಕುತ್ತದೆ. ಈ ಕಾರಣದಿಂದ ತಕ್ಷಣವೇ ಹರಿಪ್ರಸಾದ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು.