ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ 3 ಜನ ಕೂಲಿ ಕಾರ್ಮಿಕರು ಸಾವು
ಬೆಂಗಳೂರು-ಈಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಪಾದಾಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಆನೇಕಲ್ ತಾಲೂಕಿನ ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರದ ಬಳಿ ನಡೆದಿದೆ.
ಮೃತರು ಅಸ್ಸಾಂ ಮೂಲದ ಮಾಯಸಂದ್ರದ ಬಳಿಯ ಡಿಎಚ್’ಎಲ್ ಕಂಪನಿಯ ಕೂಲಿ ಕಾರ್ಮಿಕರಾದ ಚಂದನ್ ದಾಸ್ (23), ಆಶಿಕ್ (20) ಹಾಗೂ ಕರಣ್ (20) ಮೃತರು.
ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗದ ಬಿಡಿ ಭಾಗಗಳು ಬಿದ್ದಿರುವುದನ್ನು ನೋಡಿ ಸ್ಥಳೀಯರು ಕೂಡಲೇ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಅತ್ತಿಬೆಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಹನದ ಸಮೇತ ಪರಾರಿಯಾಗಿರುವ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಸ್ಸಾಂ ಮೂಲದ ಕಾರ್ಮಿಕರ ಸಂಬಂಧಿಕರು ದೊರೆತ ಬಳಿಕ ಅವರ ಹೆಸರು ಹಾಗೂ ಎಲ್ಲಿ ವಾಸವಿದ್ದರು ಎನ್ನುವುದು ಪತ್ತೆಯಾಗಿದೆ.
ರಾತ್ರಿ ಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಮೂವರು ಹತ್ತಿರದಲ್ಲಿರುವ ಮನೆಗೆ ಅತ್ತಿಬೆಲೆ ಮುಖ್ಯರಸ್ತೆಯಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆಬದಿ ಮೂವರ ದೇಹಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಕೂಲಿಗಾಗಿ ಹುಟ್ಟೂರು ಬಿಟ್ಟು ಬಂದಿದ್ದ ಕಾರ್ಮಿಕರು ದುರಂತ ಅಂತ್ಯ ಕಂಡ ಸುದ್ದಿ ಕೇಳಿ ಸ್ಥಳೀಯರೂ ಮರುಗಿದ್ದಾರೆ.
ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಮಿಕರ ಮೇಲೆ ಹರಿದು ಪರಾರಿಯಾಗಿರುವ ಈಷರ್ ವಾಹನಕ್ಕೆ ಶೋಧ ಕೈಗೊಂಡಿದ್ದಾರೆ.