ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಪಿಡಿಒ ಕಾಂತರಾಜು ಸೇರಿ ಮೂವರ ಬಂಧನ
ತಿಪಟೂರು – ತುಮಕೂರು ಜಿಲ್ಲೆಯ ತಿಪಟೂರು ನಗರದ ಹುಳಿಯಾರು ರಸ್ತೆಯ ಸಮೀಪ ಮಂಜುನಾಥ್ ನಗರದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಪಿಡಿಒ ಸೇರಿ ಮೂವರನ್ನು ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.
ನಾಗರಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಾಂತರಾಜು ಹಾಗೂ ಸಹಚರರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚೀಹಳ್ಳಿ ಗ್ರಾಮದ ಶೇಕ್ ಹುಸೇನ್, ಮೊಹ್ಮದ್ ಆರೀಫ್ ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ.
ಜನರ ಮೂಢನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಎರಡು ತಲೆ ಹಾವು ಕೋಟ್ಯಂತರ ಬೆಲೆ ಬಾಳುತ್ತದೆ, ಐಶ್ವರ್ಯ ವೃದ್ಧಿಸುತ್ತದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮೂವರನ್ನೂ ಬಂಧಿಸಿ, ಹಾವನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.