ವಿಜಯಪುರ-ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಓರ್ವ ಬಾಲಕ ಸೇರಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಜಲಸಮಾಧಿಯಾದ ಘಟನೆ ನಡೆದಿದೆ.
ಮೃತ ದುರ್ದೈವಿಗಳು ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರಸೂಲ್ ಮಾಲದಾರ ಹಾಗೂ ಸಮೀವುಲ್ಲಾ ಗೊಳಸಂಗಿ ಎಂದು ತಿಳಿದುಬಂದಿದೆ.
ಮುದ್ದೇಬಿಹಾಳ ಪಟ್ಟಣದ ಚಿಕನ್ ಸೆಂಟರ್ವೊಂದರಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಬಟ್ಟೆ ತೊಳೆಯಲೆಂದು ಹಡಗಲೇರಿ ಬಳಿಯ ನಾಲೆಗೆ ಹೋಗಿದ್ದರು. ಇದು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯಾಗಿದ್ದು, ನೀರು ತುಂಬಿ ಹರಿಯುತ್ತಿತ್ತು. ಬಟ್ಟೆ ತೊಳೆಯಲು ರಸೂಲ್ ಮತ್ತು ಸಮೀವುಲ್ಲಾ ತುಂಬಿ ಹರಿಯುತ್ತಿದ್ದ ನಾಲೆಗೆ ಇಳಿದಿದ್ದಾರೆ. ಈ ವೇಳೆ ಇಬ್ಬರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದ ಸಿಬಂದಿ ಮಾಹಿತಿ ಲಭಿಸಿದ ತತ್ಕ್ಷಣ ಸ್ಥಳಕ್ಕಾಗಮಿಸಿದ್ದಾರೆ. ಮುದ್ದೇಬಿಹಾಳ ಪೊಲೀಸರೂ ಆಗಮಿಸಿ ಮೃತದೇಹಗಳನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ತೊಡಗಿದ್ದಾರೆ