2 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಲಂಚಬಾಕ ಅಧಿಕಾರಿಗಳು
ದಾವಣಗೆರೆ- ಭೂ ಪರಿವರ್ತನೆ ಮಾಡಲು ಎರಡು ಲಕ್ಷ ರೂ. ಲಂಚ ಪಡೆಯುತ್ತಿದ್ದ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಮತ್ತು ಯೋಜನಾಧಿಕಾರಿ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ಜಿಲ್ಲೆ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅಲಿಯಾಸ್ ಕೆ.ಆರ್. ಮಂಜು ಮತ್ತು ಯೋಜನಾಧಿಕಾರಿ ಭರತ್ ಕುಮಾರ್ ಎಂಬಿಬ್ಬರು ಕಚೇರಿಯಲ್ಲೇ ಎರಡು ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ದಾವಣಗೆರೆ ನಗರದ ಶ್ರೀನಿವಾಸ್ ಮತ್ತವರ ಗೆಳೆಯ ಸಂತೋಷ್ ಎಂಬುವರ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ತಾಂತ್ರಿಕ ವಿನ್ಯಾಸ ಮತ್ತು ನಕ್ಷೆ ರಚನೆ ಮಾಡಿ ಕೊಡಲು ಸಹಾಯಕ ನಿರ್ದೇಶಕ ಮತ್ತು ಯೋಜನಾಧಿಕಾರಿ ಒಟ್ಟು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಒಂದು ಲಕ್ಷ ರೂಪಾಯಿ ಸಹ ಪಡೆದುಕೊಂಡಿದ್ದರು. ಎರಡು ಲಕ್ಷ ರೂಪಾಯಿಗೆ ಒತ್ತಾಯಿಸುತ್ತಿದ್ದರು. ಶ್ರೀನಿವಾಸ್ ಮತ್ತು ಸಂತೋಷ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ನಡೆಸಿದ ಲೋಕಾಯುಕ್ತರು ಇಬ್ಬರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಮಾರ್ಗದರ್ಶನದಲ್ಲಿ ನಿರೀಕ್ಷಕರಾದ ಎಚ್.ಎಸ್. ರಾಷ್ಟ್ರಪತಿ, ಎನ್.ಎಚ್. ಆಂಜನೇಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ಚಂದ್ರಶೇಖರ್, ಆಶಾ, ಧನರಾಜ್, ಲಿಂಗೇಶ್, ಬಸವರಾಜ್, ಮುಜೀಬ್, ಜಂಷೀದಾಖಾನಂ, ವಿನಾಯಕ, ಕೃಷ್ಣಾನಾಯ್ಕ, ಮೋಹನ್ ಆರೋಪಿತರನ್ನ ಬಂಧಿಸಿದ್ದಾರೆ.