*ಬಜೆಟ್ ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಘೋಷಣೆಯಾಗದಿದ್ದಲ್ಲಿ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ:- ಅನಂತಮೂರ್ತಿ ಹೆಗಡೆ ಆಗ್ರಹ*
ಶಿರಸಿ:- ರಾಜ್ಯ ಸರ್ಕಾರ ಇಂದು ಈ ವರ್ಷದ ಬಜೆಟ್ ಮಂಡಿಸಲಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಈ ಹಿಂದೆ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಘೋಷಣೆ ಮಾಡದಿದ್ದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂಪೂರ್ಣ ಜವಾಬ್ದಾರಿ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ನಾವು ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಲವಾರು ಹೋರಾಟಗಳನ್ನು ಮಾಡಿದ್ದು, ಜಿಲ್ಲೆಯ ಜನರು ಕೂಡಾ ಸೋಶಿಯಲ್ ಮೀಡಿಯಾ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೂ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯಾವುದೇ ತರಹದ ಪ್ರಕ್ರಿಯೆ ನಡೆಯದಿರುವುದು ಶೋಚನೀಯ ಸಂಗತಿ, ಈ ಎಲ್ಲಾ ಹೋರಾಟಗಳು ತಮ್ಮ ಗಮನಕ್ಕೆ ಬಂದಿರಲಿಲ್ಲವೇ? ಕಳೆದ ಕೆಲ ದಿನಗಳ ಹಿಂದೆ ಕುಮಟಾದಿಂದ ಭಟ್ಕಳದ ತಮ್ಮ ಕಚೇರಿಯವರೆಗೆ ಪಾದಯಾತ್ರೆಯಲ್ಲಿ ನೂರಾರು ಜನರು ಬಂದು ತಮ್ಮ ಕಛೇರಿಯ ಸಿಬ್ಬಂದಿಗೆ ಮನವಿ ನೀಡಿದ್ದೇವೆ ಇದು ತಮ್ಮ ಗಮನಕ್ಕೆ ಬಂದಿರಲೇಬೆಕು ಎಂದು ಭಾವಿಸಿದ್ದು ಆದರೆ ತಾವುಗಳು ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ನಿಮಗೆ ನಿರ್ಲಕ್ಷದ ವಿಷಯವೇ ಎಂದು ಪ್ರಶ್ನಿಸಿದ್ದಾರೆ.
ತಾವು ಈ ಹಿಂದೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಜನರಿಗೆ ಹೇಳಿದ್ದೀರಿ, ತಾವು ಕ್ಷೇತ್ರದ ಶಾಸಕರಾಗಿ ಈಗ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾಗಿದೆ, ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲಿ ಸರ್ಕಾರದಿಂದ ಮಂಜೂರಾದ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸಲು ತಾವು ಯಾವುದೇ ರೀತಿಯಲ್ಲೂ ಪ್ರಯತ್ನ ಮಾಡದಿರುವುದು ಶೋಚನೀಯ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಒಂದು ಸಭೆ ನಡೆಸದಿರುವುದು ಇದರಿಂದ ತಿಳಿಯುತ್ತದೆ. ಜಿಲ್ಲೆಯ ಜನರ ಕಷ್ಟಗಳು ತಮಗೆ ಅರಿವಿಗೆ ತಿಳಿದಿಲ್ಲವೇ? ಇನ್ನೂ ಎಷ್ಟು ವರ್ಷ ಜಿಲ್ಲೆಯ ಜನರು ಆಸ್ಪತ್ರೆಗಾಗಿ ಪಕ್ಕದ ಜಿಲ್ಲೆ ಅಥವಾ ಪಕ್ಕದ ರಾಜ್ಯಗಳಿಗೆ ಅಲೆಯಬೇಕು. ತಮ್ಮ ಸರ್ಕಾರದಿಂದ ಬಜೆಟ್ ಮಂಡನೆಯಾಗಲಿದ್ದು, ಈ ಬಜೆಟ್ ನಲ್ಲಿ ಜಿಲ್ಲೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಘೋಷಣೆಯಾಗುತ್ತದೆ ಎಂದು ನಂಬಿದ್ದೇವೆ. ಒಂದು ವೇಳೆ ಘೋಷಣೆಯಾಗದಿದ್ದರೆ ತಾವು ಇದಕ್ಕೆ ಸಂಪೂರ್ಣ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು
ಎಂದು ಆಗ್ರಹಿಸಿದ್ದಾರೆ.
ನಿನ್ನೆ ಭಟ್ಕಳದಲ್ಲಿ ನಡೆದ ಅಪಘಾತ ದಲ್ಲಿ ನಾಲ್ವರು ಗಂಭೀರ ಗಾಯಗೊಂಡ ಅವರನ್ನು ಪಕ್ಕದ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ. ನಮ್ಮಲ್ಲೇ ಆಸ್ಪತ್ರೆ ಇದ್ದರೆ ಪಕ್ಕದ ಜಿಲ್ಲೆಗೆ ಹೋಗುವ ಅವಶ್ಯಕತೆ ಇರುತ್ತಿತ್ತೇ. ಜಿಲ್ಲೆಯ ಬಡ ಮೀನುಗಾರರು ತಮ್ಮ ಚಿಕಿತ್ಸೆಗೆ ಎಲ್ಲಿ ಹೋಗಬೇಕು, ತಾವು ಕೇವಲ ಹಣ ಮಾಡುವುದರೊಂದಿಗೆ ತೊಡಗಿಕೊಂಡರೇ, ಆ ಬಡವರ ಕಷ್ಟ ಕೇಳುವವರ್ಯಾರು? ಅವರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ನಾವು ಆಸ್ಪತ್ರೆ ನಿರ್ಮಾಣ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ರಾಜೀನಾಮೆಗೆ ಒತ್ತಾಯಿಸುವುದರೊಂದಿಗೆ ತಮ್ಮ ಕಛೇರಿ ಹಾಗೂ ಬೆಂಗಳೂರಿನ ವಿಧಾನಸೌಧ ಎದುರು ಗಾಂಧಿ ಪ್ರತಿಮೆಯ ಬಳಿ ಜಿಲ್ಲೆಯ ನೂರಾರು ಜನರು, ಯುವಕರೊಂದಿಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಮಗೆ ಈ ಮೂಲಕ ಎಚ್ಚರಿಕೆ ನೀಡುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.