ಕುಂದಾಪುರ: ಹೊಸದಾಗಿ ಖರೀದಿಸಿದ ಜಮೀನು ನೋಂದಣಿ ಮಾಡಲು ಹೋದ ಮಹಿಳೆಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಳ್ಕೂರಿನ ನಿವಾಸಿ, ಸಮೀಪದ ಪಾನಕದ ಕಟ್ಟೆ ಎಂಬಲ್ಲಿ ಹೇರ್ ಸೆಲೂನ್ ನಡೆಸುತ್ತಿದ್ದ ವಿನಯ್ ಭಂಡಾರಿ ಎಂಬವರ ಪತ್ನಿ ಶ್ರುತಿ (33) ಎಂದು ತಿಳಿಯಲಾಗಿದೆ.
ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದರು. ಸಾಲಿಗ್ರಾಮದ ಮೂಲದ ಶೃತಿ ಬ್ರಾಹ್ಮಣರಾಗಿದ್ದು ಕಾಲೇಜು ಸಂದರ್ಭದಲ್ಲಿ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಸ್ತುತ ಬಳ್ಕೂರು ಸಮೀಪದ ಬಿಹೆಚ್ ಎಂಬಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿ, ಬಳ್ಕೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಬಂದಿದ್ದರು.
ಬಳಿಕ ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ಬಳ್ಕೂರು ಸಮೀಪದ ಹೊಳೆಯ ಬದಿಗೆ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.