ಮೂಡಭಟ್ಕಳ ಶಾಲೆಯಲ್ಲಿ ನಡೆಯಿತು ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಾಮಾಜಿಕ ಪರಿಶೋಧನೆ
ಭಟ್ಕಳ- ಸಾಮಾಜಿಕ ಪರಿಶೋಧನೆ ಸರಕಾರಿ ಯೋಜನೆಯ ಅನುಷ್ಟಾನದ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮುದಾಯಕ್ಕೆ ಒಂದು ಉಪಯುಕ್ತ ವೇದಿಕೆ ಎಂದು ತಾಲೂಕು ಪಂಚಾಯತಿ ಭಟ್ಕಳದ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ನಾಗರಾಜ ಅಭಿಪ್ರಾಯಪಟ್ಟರು. ಅವರು ಮೂಡಭಟ್ಕಳ ಶಾಲೆಯಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಲ್ಲಿನ ಸಾಮಾಜಿಕ ಪರಿಶೋಧನೆ ಶಾಲಾ ಸಭೆಯ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಹತ್ತಾರು ವರ್ಷಗಳಿಂದ ಸಾಮಾಜಿಕ ಪರಿಶೋಧನೆ ನಡೆಯುತ್ತಿದ್ದು ಸಾಕಷ್ಟು ಸಕಾರಾತ್ಮಕ ಬದಲಾವಣೆಯನ್ನು ಇದರಿಂದ ಕಂಡಿದ್ದೇವೆ.ಇದಿಗ ಪ್ರಥಮ ಬಾರಿ ಶಿಕ್ಷಣ ಇಲಾಖೆಯಲ್ಲಿ ಸಾಮಾಜಿಕ ಪರಿಶೋಧನೆ ನಡೆಯುತ್ತಿರುವ ನಿಜಕ್ಕೂ ಸ್ವಾಗತಾರ್ಹ ಎಂದರು.
ಸಾಮಾಜಿಕ ಪರಿಶೋಧನೆ ಕೇಂದ್ರ ಸರಕಾರದ ಒಂದು ವಿಭಿನ್ನ ಕಲ್ಪನೆಯಾಗಿದ್ದು ಉಳಿದೆಲ್ಲ ಪರಿಶೋಧನೆಗಿಂತ ಹೆಚ್ಚಿನ ಫ್ರತಿಫಲ ಇದರಿಂದ ಸಾಧ್ಯ,ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಸಾಧಿಸುವಲ್ಲಿ ಅತ್ಯಂತ ಉಪಯುಕ್ತವಾದುದು ಎಂದು ತಾಲೂಕು ಪಂಚಾಯನ ಸಾಮಾಜಿಕ ಪರಿಶೋಧನೆಯ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ನುಡಿದರು. ಸಾಮಾಜಿಕ ಪರಿಶೋಧನೆ ನಿರ್ಧೇಶನಾಲಯದ ಆದೇಶದಂತೆ ಫೆಬ್ರವರಿ ಒಂದರಿಂದ ಮೂಡಭಟ್ಕಳ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟದ ಸಾಮಾಜಿಕ ಪರಿಶೋಧನೆ ನಡೆಸುತ್ತಿದ್ದು ಅದರಲ್ಲಿ ತಮ್ಮ ತಂಡವು ಕೈಗೊಂಡ ಪ್ರತಿ ಹಂತಗಳ ವಿವರಗಳನ್ನು ಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಬಿಸಿಊಟದ ಅಡುಗೆ ಕೋಣೆಯ ಪರಿಶೀಲನೆ, ಊಟ ತಯಾರಿಕಾ ಹಂತ, ಬಡಿಸುವಲ್ಲಿನ ಸ್ವಚ್ಚತೆ ಊಟದ ರುಚಿ, ಮಕ್ಕಳ ಹಾಗೂ ಪಾಲಕರ ಅಭಿಪ್ರಾಯ ಸಂಗ್ರಹಣೆ ಪುರ್ವಬಾವಿ ಸಭೆ ಈ ಎಲ್ಲ ವಿಷಯಗಳ ಕುರಿತು ತಾವು ಕಂಡುಕೊಂಡ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಹಾಗೂ ಪಾಲಕರಿಗೆ ಅವರ ಅಭಿಪ್ರಾಯಗಳಿಗೆ ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶ ನೀಡಲಾಯಿತು.
ನಂತರ ಮಾತನಾಡಿದ ಶಿಕ್ಷಣ ಇಲಾಖೆಯ ಪುರವರ್ಗ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಜಯಶ್ರೀ ಆಚಾರ್ಯ ಮಾತನಾಡಿ ಎಲ್ಲ ಇಲಾಖೆಗಳಲ್ಲಿ ಈಗಾಗಲೆ ಚಾಲ್ತಿಯಿದ್ದ ಸಾಮಾಜಿಕ ಪರಿಶೋಧನೆ ನಮ್ಮ ಇಲಾಖೆಗೆ ವಿಸ್ತರಿಸಿಕೊಂಡಿದ್ದು ಪಾರದರ್ಶಕತೆಯ ದೃಷ್ಟಿಯಿಂದ ಅತ್ಯಂತ ಖುಷಿಕೊಟ್ಟ ವಿಚಾರ ಎಂದರು.
ಮೊದಲಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಗೀತಾ ಶಿರೂರು ವಂದಿಸಿದರು. ಸಹ ಶಿಕ್ಷಕಿ ಪ್ರತಿಭಾ ಕರ್ಕಿಕರ್ ಕಾರ್ಯಕ್ರಮ ನಿರ್ವಹಿಸಿದರು.ಶಾಲಾ ಮಕ್ಕಳು ಮೊದಲಿಗೆ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷೆ ಕಮಲಾ ನಾಯ್ಕ, ಗ್ರಾ.ಪಂ..ಸದಸ್ಯೆ ಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿ ಸದಸ್ಯರು ಹಾಗೂ ೭೦ ಕ್ಕೂ ಹೆಚ್ಚಿನ ಪಾಲಕರು ಹಾಜರಿದ್ದರು.