“ಅಯೋಧ್ಯಾ ಪ್ರಭು ಶ್ರೀ ರಾಮ ” ಉಮೇಶ ಮುಂಡಳ್ಳಿ ಅವರ ಭಕ್ತಿ ಗೀತೆ ಅಲ್ಬಮ್ ಬಿಡುಗಡೆ
ಭಟ್ಕಳ- ಅಯೋಧ್ಯಾ ಶ್ರೀ ರಾಮ ಮಂದಿರ ಲೋಕಾರ್ಪಣೆ ಗೊಳ್ಳುವ ಈ ಐತಿಹಾಸಿಕ ಶುಭಗಳಿಗೆಯಲ್ಲಿ ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿ ಅವರ ಅಯೋಧ್ಯಾ ಪ್ರಭು ಶ್ರೀ ರಾಮ ಎನ್ನುವ ಭಕ್ತಿ ಗೀತೆ ಅಲ್ಬಂ ಬಿಡುಗಡೆಗೊಂಡಿತು.
ರಾಮೋತ್ಸವ ಅಂಗವಾಗಿ ಕುದುರೆ ಬೀರಪ್ಪ ಮುಖ್ಯ ಪ್ರಾಣ ದೇವಸ್ಥಾನದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವ ವೇದಿಕೆಯಲ್ಲಿ ಮುಂಡಳ್ಳಿ ಅವರ ಅಲ್ಬಂ ಅನ್ನು ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾದ ಆರ್ ಭಾಸ್ಕರ್ ನಾಯ್ಕ ಅವರು ಬಿಡುಗಡೆಗೊಳಿಸಿದರು.
ಈ ಅಲ್ಬಂ ನಲ್ಲಿ ಶ್ರೀ ರಾಮನ ಕುರಿತಾದ ನಾಲ್ಕು ಹಾಡುಗಳಿದ್ದು, ಎಂತ ಸೊಬಗದು ಸುಂದರ ಭವ್ಯ ಶ್ರೀ ರಾಮ ಮಂದಿರ, ಹಾಗೂ ರಾಮ ರಾಮ ಎನ್ನಿರೋ ಎರಡು ಸಾಹಿತ್ಯ ಉಮೇಶ ಮುಂಡಳ್ಳಿ ಅವರದ್ದಾಗಿದ್ದು, ಅಯೋಧ್ಯೆಯಲ್ಲಿ ನಿನ್ನ ದಿವ್ಯ ಮಂದಿರ ,ಇದರ ಸಾಹಿತ್ಯ ಅಶ್ವಿನಿ ಕೋಡಿಬೈಲು ಸುಳ್ಯದವರದಾಗಿದ್ದರೆ, ಶ್ರೀ ರಾಮನ ಪೂಜೆಯಲ್ಲಿ ಅಯೋದ್ಯೆ ಮೀಯುತಿಹುದು ಈ ಗೀತೆ ಹುಬ್ಬಳ್ಳಿಯ ಡಾ.ಶ್ರೀಶೈಲ ಮಾದಣ್ಣನವರ ಅವರದಾಗಿದೆ. ಈ ಎಲ್ಲ ನಾಲ್ಕು ಗೀತೆಗಳನ್ನು ಉಮೇಶ ಮುಂಡಳ್ಳಿ ಅವರು ಸ್ವರ ಸಂಯೋಜನೆ ಮಾಡಿ ಹಾಡಿರುತ್ತಾರೆ. ಗೀತೆಗೆ ವಾದ್ಯ ಸಂಯೋಜನೆ ವಿನಾಯಕ ದೇವಾಡಿಗ, ತಬಲ ಆದಿತ್ಯ ದೇವಾಡಿಗ ಹಾಗೂ ಕೀಬೋರ್ಡ್ ವಿಘ್ನೇಶ ಗೌಡ ಮಾಡಿರುತ್ತಾರೆ.
ಅಲ್ಬಂ ಬಿಡುಗಡೆ ಸಂಧರ್ಭದಲ್ಲಿ ಕುದುರೆ ಬೀರಪ್ಪ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಆಸರಕೇರಿ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಯಶೋಧರ ನಾಯ್ಕ, ವೆಂಕಟೇಶ ನಾಯ್ಕ, ಆದಿತ್ಯ ದೇವಾಡಿಗ ನಿನಾದ ಹಾಗೂ ಉತ್ಥಾನ ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಸವಿತಾ ನಾಯ್ಕ ನಿರ್ವಹಿಸಿದರು.