ಕಾಸ್ಮುಡಿ ಹನುಮಂತ ಬಾರೋ ” ಉಮೇಶ ಮುಂಡಳ್ಳಿ ಭಕ್ತಿ ಗೀತೆ ಬಿಡುಗಡೆ
ಭಟ್ಕಳ- ಜಿಲ್ಲೆಯ ಭಾವಕವಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ ಗಾಯಕ ಉಮೇಶ ಮುಂಡಳ್ಳಿ ಅವರು ಬರೆದು ಹಾಡಿರುವ ಶ್ರೀ ಕಾಸ್ಮುಡಿ ಹನುಮಂತ ಬಾರೋ ಭಕ್ತಿಗೀತೆ ಇಂದು ಬಿಡುಗಡೆಗೊಂಡಿತು.
ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಮೊದಲ ದಿನವಾದ ಇಂದು ಹನುಮಂತನ ಕುರಿತು ಉಮೇಶ ಮುಂಡಳ್ಳಿ ಸ್ವತಃ ಸಾಹಿತ್ಯ ಬರೆದು ಸ್ವರಸಂಯೋಜನೆ ಮಾಡಿ ಹಾಡಿರುವ ಕಾಸ್ಮುಡಿ ಹನುಮಂತ ಬಾರೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾ ಪ್ರಮುಖರಾದ ಆರ್ ಭಾಸ್ಕರ್ ನಾಯ್ಕ ಅವರು ಮುಂಡಳ್ಳಿ ಅವರು ಹಾಡುರುವ ಭಕ್ತಿ ಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಭಗವಂತ ಎಲ್ಲಕ್ಕಿಂತ ಮುಗಿಲಾಗಿ ಭಕ್ತಿಗೆ ಬೇಗ ಒಲಿಯುತ್ತಾನೆ. ಭಕ್ತಿ ಇಲ್ಲದ ದಾನ ಸೇವೆ ನಿರರ್ಥಕ. ನಾಮಸ್ಮರಣೆ ಮತ್ತು ಭಜನೆಯಿಂದ ದೇವರು ಬೇಗ ಸಂತುಷ್ಟನಾಗುತ್ತಾನೆ. ಅಂತ ಭಕ್ತಿ ಪೂರ್ಣ ಗೀತೆಯನ್ನು ಮುಂಡಳ್ಳಿ ಅವರು ಅರ್ಪಿಸಿದ್ದಾರೆ ಎಂದು ಅವರು ನುಡಿದರು.
ದೇವಸ್ಥಾನನ ಆಡಳಿತ ಮಂಡಳಿಯ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅಬ್ಬಿಹಿತ್ಲು ಮಾತನಾಡಿ ಕಾಸ್ಮುಡಿ ಹನುಮಂತನೇ ಉಮೇಶ ಅವರಿಂದ ಇಷ್ಟು ಸೊಗಸಾದ ಗೀತೆಯನ್ನು ಬರೆಸಿದ್ದಾನೆ. ನಮ್ಮ ನಡುವೆ ಇರುವ ಇಂತಹ ಪ್ರತಿಭಾನ್ವಿತ ರಿಗೆ ಎಲ್ಲ ರೀತಿಯಿಂದಲೂ ಸಹಕಾರದ ಅಗತ್ಯ ಪ್ರೊತ್ಸಾಹದ ಅಗತ್ಯತೆ ಇದೆ ಈ ಗೀತೆ ಎಲ್ಲರ ಮನೆ ಮಾತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಅಧ್ಯಕ್ಷತೆಯ ವಹಿಸಿದ್ದ ಪ್ರಕಾಶ ನಾಯ್ಕ ಅರಬೈಲು ಅವರು ಕಾಸ್ಮುಡಿ ಹನುಮಂತನ ಹಾಡು ಭಕ್ತಿ ಜೊತೆ ಭಾವುಕರನ್ಬಾಗಿ ಮಾಡಿದ ಬಗ್ಗೆ ಒಮ್ಮೆ ಗದ್ಗರಿತರಾಗಿ ನುಡಿದು ನಾಸ್ತಿಕರನ್ನು ಆಸ್ತಿಕರನ್ಬಾಗಿಸುವ ಶಕ್ತಿ ಈ ಗೀತೆಗಿದೆ ಎಂದು ಗಾಯಕರಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಭಾಸ್ಕರ್ ಎಸ್ ನಾಯ್ಕ, ಗಾಯಕಿ ಉಮಾ ಕಿಣಿ, ಅಣ್ಣಪ್ಪ ನಾಯ್ಕ ಅಬ್ಬಿಹಿತ್ಲು, ಜ್ಯೋತಿ ಈರಪ್ಪ ಗರ್ಡಿಕರ್, ಮೃತ್ಯುಂಜಯ ಆಚಾರ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮಾಲತಿ ರಾಜೇಶ ನಾಯ್ಕ ಸ್ವಾಗತಿಸಿದರು ವಿಶ್ವನಾಥ ಆಚಾರ್ಯ ವಂದಿಸಿದರು.