ಭಟ್ಕಳ : ಭಟ್ಕಳ ತಾಲೂಕು ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಟ್ಕಳದ ಕರಿಕಲ್ ನಲ್ಲಿರುವ ಧ್ಯಾನ ಮಂದಿರದಲ್ಲಿ ಆಗಸ್ಟ ೨೫ ನೇ ತಾರೀಖಿನಂದು ನಡೆಯಲಿರುವ ನಾರಾಯಣಗುರು ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಚಿಂತನೆ” ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯು ಇಲ್ಲಿನ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.
ತಾಲೂಕಿನ ವಿವಿಧ ಕಾಲೇಜುಗಳಿಂದ ಹದಿನಾಲ್ಕು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಭಾಷಣ ಸ್ಪರ್ಧೆಯಲ್ಲಿ ನ್ಯೂ ಇಂಗ್ಲಿಷ್ ಪ.ಪೂ.ಕಾಲೇಜಿನ ವಿಧಾತ್ರಿ ಭಟ್ ಪ್ರಥಮ, ಆರ್.ಎನ್.ಎಸ್.ಪ.ಪೂ. ಕಾಲೇಜಿನ ನಾಗಶ್ರೀ ಹೆಗಡೆ ದ್ವಿತೀಯ ಹಾಗೂ ಆನಂದಾಶ್ರಮ ಪ.ಪೂ.ಕಾಲೇಜಿನ ವರ್ಷಿತಾ ನಾಯ್ಕ, ಬೀನಾ ವೈದ್ಯ ಪ.ಪೂ.ಕಾಲೇಜಿನ ಚೈತ್ರಾ ನಾಯ್ಕ ತೃತೀಯ ಬಹುಮಾನವನ್ನು ಪಡೆದುಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಾರಾಯಣಗುರು ಜಯಂತ್ಯುತ್ಸವ ಸಮಿತಿ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಕುರಿತಾದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ನಾರಾಯಣ ಗುರುಗಳ ಜೀವನ, ಅವರ ಸಾಮಾಜಿಕ ಧಾರ್ಮಿಕ ಸುಧಾರಣಾ ಕಾರ್ಯಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಗುರು ಜಯಂತ್ಯುತ್ಸವ ಸಮಿತಿಯ ಸಂಚಾಲಕ ಮನಮೋಹನ ನಾಯ್ಕ, ನಾಮಧಾರಿ ಸಮಾಜದ ಮಾಜಿ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಈಶ್ವರ ನಾಯ್ಕ ತಲಗೋಡು ವಿದ್ಯಾರ್ಥಿಗಳು ಹಾಗೂ ಉಒನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸಾಹಿತಿ ಮಾನಾಸುತ ಶಂಭು ಹೆಗಡೆ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬಂಢಾರಿಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಂಡರಲ್ಲದೇ ವಿದ್ಯಾರ್ಥಿಗಳ ವಿಷಯ ಸಂಗ್ರಹ, ಮಾತುಗಾರಿಕೆ ಕೌಶಲ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು, ಹಾಗೂ ಪುಸ್ತಕ ಬಹುಮಾನ, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ವನ್ನು ಆಗಸ್ಟ ೨೫ ನೇ ತಾರೀಖಿನಂದು ಕರಿಕಲ್ ನ ಧ್ಯಾನಮಂದಿರದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ನಾರಾಯಣ ಗುರು ಜಯಂತ್ಯುತ್ಸವದ ಸಂಚಾಲಕ ಮನಮೋಹನ ನಾಯ್ಕ ತಿಳಿಸಿದ್ದಾರೆ.