ಭಟ್ಕಳ-ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ, ಹಿಂದೂಪರ ಹೋರಾಟ ಗಾರ ರಾಘವೇಂದ್ರ ನಾಯ್ಕರ ಮೇಲೆ ಹಲ್ಲೆ ನಡೆದಿದೆ. ಕಾಲೇಜು ಬಸ್ಸು ಓಡಿಸಿಕೊಂಡು ಬಂದ ಚಾಲಕನೊಬ್ಬ ಅವರಿಗೆ ಗುದ್ದಲು ಪ್ರಯತ್ನಿಸಿದ್ದು, ನೆಲಕ್ಕೆ ಬಿದ್ದ ರಾಘವೇಂದ್ರ ನಾಯ್ಕರನ್ನು ತುಳಿದು ಹಲ್ಲೆ ಮಾಡಿದ್ದಾನೆ.
ರಾಘವೇಂದ್ರ ನಾಯ್ಕ ಭಟ್ಕಳದಲ್ಲಿ ಟಿವಿ ಕೇಬಲ್ ಆಪರೇಟರ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ಸೋಮವಾರ ಕಾರವಾರಕ್ಕೆ ಹೋಗಿದ್ದ ಅವರು ಅಲ್ಲಿಂದ ಮರಳಿ ತಮ್ಮ ಕಚೇರಿಗೆ ಹೋಗುತ್ತಿದ್ದರು. ಆಗ ಬಸ್ಸು ಓಡಿಸಿಕೊಂಡು ಬಂದ ಚಾಲಕ ಹತ್ತಿರ ಬಂದಾಗ ರಾಘವೇಂದ್ರ ನಾಯ್ಕರು `ಕಣ್ಣು ಕಾಣುವುದಿಲ್ಲವಾ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಟ್ಟಾದ ಚಾಲಕ ಭಟ್ಕಳದ ಶಂಸುದ್ದಿನ್ ಸರ್ಕಲ್ ಬಳಿ ಬಸ್ಸು ನಿಲ್ಲಿಸಿ ಅವರ ಬಳಿ ಬಂದು ಕಾಲಿನಿಂದ ತುಳಿದು ಜೀವ ಬೆದರಿಕೆ ಒಡ್ಡಿದ್ದಾನೆ.
ಈ ವೇಳೆ ಅಲ್ಲಿಯೇ ಇದ್ದ ಪೊಲೀಸರನ್ನು ಕಂಡು ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದರು. ಗಾಯಗೊಂಡ ರಾಘವೇಂದ್ರ ನಾಯ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.ಭಟ್ಕಳ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.