ಭಟ್ಕಳದ ತಾಲೂಕಿನ ಮಾವಿನಕಟ್ಟಾದ ಬಳಿಯ ಮೋಳಿನಮನೆಯ ವಿನಾಯಕ ಮಂಜುನಾಥ ದೇವಾಡಿಗ (26) ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಅವರು ಮುರುಡೇಶ್ವರ ಬಳಿಯ ಬೆಂಗ್ರೆಯ ಚಿಟ್ಟಿಹಕ್ಲ ಅರಣ್ಯ ಪ್ರದೇಶಕ್ಕೆ ಜನರನ್ನು ಕರೆದಿದ್ದರು. ಅಲ್ಲಿ ಬಂದವರಿಗೆ ಹಣ ಡಬಲ್ ಮಾಡಿಕೊಡುವ ಭರವಸೆ ನೀಡಿದ್ದರು.
`ಇಸ್ಪಿಟ್ ಎಲೆಗಳ ಮೇಲೆ ಎಲ್ಲರೂ 50ರೂ ಹೂಡಿಕೆ ಮಾಡಬೇಕು. ಅದೇ ಸಂಖ್ಯೆ ಬಂದವರಿಗೆ ಡಬಲ್ ಹಣ ಕೊಡುವೆ’ ಎನ್ನುತ್ತ ಅವರು ಕಾಸು ಸಂಗ್ರಹಿಸಿದ್ದರು. ಇದೇ ರೀತಿ ನಂಬಿಸಿ ಜನರಿಂದ 4600ರೂ ಹಣವನ್ನು ಅವರು ಸಂಗ್ರಹಿಸಿದ್ದರು. ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬೀರಾದರ ಅವರಿಗೆ ಈ ವಿಷಯ ಗೊತ್ತಾಯಿತು.
ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿರುವುದನ್ನು ಸಹಿಸದ ಹಣಮಂತ ಬೀರಾದರ ಅವರು ಪೊಲೀಸ್ ತಂಡದ ಜೊತೆ ದಾಳಿ ಮಾಡಿದರು. ವಿನಾಯಕ ದೇವಾಡಿಗ ಬಳಿಯಿದ್ದ ಹಣ, ಇಸ್ಪಿಟ್ ಎಲೆ ಜೊತೆ ಅವರ ಬೈಕನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.