
ಕಾರವಾರ: ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಜುಲೈ 7ರಂದು ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಮತ್ತು ದಾಂಡೇಲಿ ತಾಲ್ಲೂಕುಗಳ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಈ ಆದೇಶದ ವ್ಯಾಪ್ತಿಗೆ ಒಳಪಟ್ಟಿವೆ.ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ–2005ರ ಕಲಂ 34(ಎಂ) ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಇರುವ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದ್ದು, ಸಂಬಂಧಿತ ಇಲಾಖೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.ಇದೇ ವೇಳೆ, ರಜೆಯಿಂದ ಉಂಟಾಗುವ ಶೈಕ್ಷಣಿಕ ಹಾಗೂ ಅಂಗನವಾಡಿ ಕಾರ್ಯದಿನಗಳ ನಷ್ಟವನ್ನು ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಸರಿಹೊಂದಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.
