ಭಟ್ಕಳ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ನ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ ಎಂದು ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ ನಾಯ್ಕ್ ತಿಳಿಸಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಜಿ.ಯು. ಭಟ್ ಅವರು, ನಿಷ್ಪಕ್ಷಪಾತ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಾ, ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರು ನಡೆಸಿದ ಸುದೀರ್ಘ ಪತ್ರಿಕಾ ಸೇವೆ ಪ್ರಶಂಸನೀಯವಾಗಿದೆ.ಸಮಾಜಮುಖಿ ಚಿಂತನೆ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರವಾಗಿದೆ ಎಂದು ಪ್ರೆಸ್ ಕ್ಲಬ್ ಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ಅರ್ಜುನ್ ದೈವಜ್ಞ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಜಿ.ಯು. ಭಟ್ ಅವರಿಗೆ ಅಭಿನಂದನೆ ಸಲ್ಲಿಸಿ, ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಾಜಕ್ಕೆ ಇನ್ನಷ್ಟು ಮಾರ್ಗದರ್ಶನ ನೀಡುವ ಶಕ್ತಿ ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.
