ತುರುವೇಕೆರೆ: ತಾಲೂಕಿನ ದಂಡಿನ ಶಿವರ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಯ್ಯನ ಪಾಳ್ಯದ ಬಳಿಯ ಕಾಲುವೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಮೃತ ಮಹಿಳೆಯ ಪತಿ ಆರೋಪಿಸಿದ್ದಾರೆ.
ಕುರುಬರಹಳ್ಳಿ ಗ್ರಾಮದ ರವಿಕುಮಾರ್ ಅವರ ಪತ್ನಿ ಆಶಾ(29) ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಈಕೆಗೆ ಇಬ್ಬರು ಮಕ್ಕಳಿದ್ದಾರೆ. ತೋಟದಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ಶವವನ್ನು ಸಣ್ಣಯ್ಯನ ಪಾಳ್ಯದ ಬಳಿ ಇರುವ ಕಾಲುವೆಗೆ ಎಸೆದು ಹೋಗಲಾಗಿದೆ ಎಂದು ಶಂಕಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹತ್ಯೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ ಆದರೆ, ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಿದೆ ಎಂದು ಮೃತ ಮಹಿಳೆಯ ಪತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕುಣಿಗಲ್ ಡಿ ವೈ ಎಸ್ ಪಿ ರಮೇಶ್, ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ ನಾಯಕ್ , ದಂಡಿನಶಿವರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರಾಮಚಂದ್ರಪ್ಪ, ಎಎಸ್ ಐ ಗಂಗಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.