ಉಡುಪಿ-ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿ ಹರಿದಾಡುತ್ತಿದ್ದು, ಕೊಲೆಗೈದ ಆಗಂತುಕ ಆಟೋದಲ್ಲಿ ಬಂದು 15 ನಿಮಿಷದಲ್ಲಿ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಆರೋಪಿ ಸಂತೆಕಟ್ಟೆಯಿಂದ ರಿಕ್ಷಾ ಹತ್ತಿಕೊಂಡು ಬಂದು, ಮನೆಗೆ ನುಗ್ಗಿ ಈ ಕೃತ್ಯವನ್ನು 8:30ರಿಂದ 9 ಗಂಟೆಯ ಮಧ್ಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.ಆರೋಪಿ ಕೊಲೆ ನಡೆಸುವ ಮುನ್ನ ಉಡುಪಿಯ ಆಟೋ ಚಾಲಕ ಶ್ಯಾಮ್ ಎಂಬವರ ಆಟೋ ರಿಕ್ಷಾದಲ್ಲಿ ಕೊಲೆಯಾದ ಹಸೀನಾ ಅವರ ಮನೆಗೆ ಆಗಮಿಸಿದ್ದಾನೆ. ಅದಕ್ಕೂ ಮುನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಬಳಿಕ ಕೊಲೆ ಕೃತ್ಯ ನಡೆಸಿ, 9 ಗಂಟೆಯ ವೇಳೆಗೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ಆಟೋ ಚಾಲಕ ಶ್ಯಾಮ್ ಎಂಬುವವರು, “ಇಂದು(ನ.12 ಭಾನುವಾರ) ಬೆಳಗ್ಗೆ 8:30ರಿಂದ 9 ಗಂಟೆಯ ಮಧ್ಯೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕ್ವೀನ್ಸ್ ರಸ್ತೆಯಲ್ಲಿ ನನ್ನ ರಿಕ್ಷಾವನ್ನು ಏರಿ, ನೇಜಾರುವಿನ ತೃಪ್ತಿ ಲೇಔಟ್ಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಅದರಂತೆ ಆತನನ್ನು ತೃಪ್ತಿ ಲೇಔಟ್ನಲ್ಲಿ ಇದೀಗ ಕೊಲೆ ನಡೆದಿರುವ ಹಸೀನಾ ಅವರ ಮನೆಯ ಗೇಟ್ ಬಳಿ ಬಿಟ್ಟಿದ್ದೇನೆ. ಈ ನಡುವೆ ನನಗೆ ದಾರಿ ತಪ್ಪಿದಾಗ ಆತನೇ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.
‘ಕೊಲೆ ನಡೆದಿರುವ ಮನೆಗೆ ನಾನು ಬಿಟ್ಟ ಬಳಿಕ 15 ನಿಮಿಷಗಳ ಅಂತರದಲ್ಲಿ ಆತ ಮತ್ತೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದು ಕ್ಯೂನಲ್ಲಿದ್ದ ಬೇರೊಂದು ರಿಕ್ಷಾ ಏರಿದ್ದಾನೆ. ಈ ವೇಳೆ ಆತನನ್ನು ಗುರುತಿಸಿದೆ. ಆ ವೇಳೆ ಆತನಲ್ಲಿ ನಾನು, ‘ನೀವು ಇಷ್ಟು ಬೇಗ ಬರಲಿಕ್ಕಿದ್ದಿದ್ದರೆ ನಾನೇ ಅಲ್ಲೇ ನಿಂತು ಕಾಯುತ್ತಿದ್ದೆ ಎಂದು ಹೇಳಿದೆ. ಅದಕ್ಕೆ ಆತ ಪರವಾಗಿಲ್ಲ ಎಂದ. ಅಲ್ಲದೆ, ಹತ್ತಿದ ಇನ್ನೊಂದು ರಿಕ್ಷಾ ಚಾಲಕನಿಗೆ ವೇಗವಾಗಿ ಹೋಗುವಂತೆ ಹೇಳುತ್ತಿರುವುದು ಕೇಳಿತು’ ಎಂದು ಆಟೋ ಚಾಲಕ ಮಾಹಿತಿ ನೀಡಿದ್ದಾರೆ.
ಸುಮಾರು 45 ವರ್ಷ ಪ್ರಾಯದ ಆ ವ್ಯಕ್ತಿ ಕನ್ನಡ ಮಾತನಾಡುತ್ತಿದ್ದ. ಮುಖಕ್ಕೆ ಮಾಸ್ಕ್ ಧರಿಸಿದ್ದ. ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ, ಬಿಳಿ ಮೈಬಣ್ಣ ಹೊಂದಿದ್ದ ಎಂದು ಆರೋಪಿಯನ್ನು ಮೊದಲು ತನ್ನ ರಿಕ್ಷಾದಲ್ಲಿ ಹತ್ತಿಸಿಕೊಂಡಿದ್ದ ಚಾಲಕ ಶ್ಯಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಟೋ ಚಾಲಕರ ಮಾಹಿತಿಯ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಪರಿಚಿತರೇ ಎಸಗಿರುವ ಕೃತ್ಯ ಶಂಕೆ ವ್ಯಕ್ತವಾಗುತ್ತಿದೆ.ಉಡುಪಿ ಎಸ್ಪಿ
ಉಡುಪಿಯ ನೇಜಾರುವಿನ ತೃಪ್ತಿ ನಗರದಲ್ಲಿ ಮ ನಾಲ್ವರ ಹತ್ಯೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ‘ನಾಲ್ವರನ್ನು ಕೊಲೆಗೈದಿದ್ದಾನೆ. ಘಟನೆಯಲ್ಲಿ ಮನೆಯ ಯಜಮಾನಿ ಹಸೀನಾ ಅವರ ಅತ್ತೆಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಯಜಮಾನ ವಿದೇಶದಲ್ಲಿದ್ದು, ಅವರನ್ನು ಸಂಪರ್ಕಿಸುತ್ತೇವೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಕೊಲೆಯ ಹಿಂದಿನ ಕಾರಣ ತನಿಖೆಯಿಂದ ಗೊತ್ತಾಗಲಿದೆ’ ಎಂದು ತಿಳಿಸಿದ್ದಾರೆ.