ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದಡಿಯಲ್ಲಿ ಆರೋಗ್ಯ ಇಲಾಖೆ ಎಫ್.ಡಿ.ಎ ನೌಕರ ಶಂಕರ ಸಸ್ಪೆನ್ಡ್ (ಅಮಾನತ್ತು)
ಸಿದ್ದಾಪುರ: ಆರೋಗ್ಯ ಇಲಾಖೆಯ 2 ಜನ ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದಡಿಯಲ್ಲಿ ಸಿದ್ದಾಪುರ ತಾಲೂಕಿನ ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್.ಡಿ.ಎ ನೌಕರ ಶಂಕರ ನಾಯ್ಕ ಎನ್ನುವವರನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.ಇಲಾಖೆಯ ಓರ್ವ ಮಹಿಳಾ ಸಿಬ್ಬಂದಿ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆಂದು ಈಗಾಗಲೇ ದೂರು ನೀಡಿದ್ದಾರೆ. ಮತ್ತೋರ್ವ ಸಿಬ್ಬಂದಿ ಕೈಸನ್ನೆ ಮಾಡಿ ಲೈಂಗಿಕ ಶೋಷಣೆ ಎಸಗಿದ್ದಾರೆಂದು ದೂರು ನೀಡಿದ್ದು, ಇಬ್ಬರು ನೌಕರರ ದೂರಿನ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಲಾಖಾ ವಿಚಾರಣೆ ಬಾಕಿಯಿರಿಸಿ ಕರ್ತವ್ಯದಿಂದ ಅಮಾನತ್ತು ಮಾಡಿದ್ದಾರೆಂದು ತಿಳಿದು ಬಂದಿದೆ.