ಭಟ್ಕಳ- ಇನ್ಸ್ಟಾಗ್ರ್ಯಾಮನಲ್ಲಿ ಪರಿಚಯವಾದ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳದ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ನೇತ್ರಾ ಮುತ್ತಯ್ಯ ಗೋವಾಳಿ ಎಂದು ಗುರುತಿಸಲಾಗಿದೆ. ಈಕೆ ಭಟ್ಕಳ ನಗರದಲ್ಲಿ ಖಾಸಗಿ ವಕೀಲರ ಕಚೇರಿಯೊಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಈಕೆಗೆ ಕಿರುಕುಳವನ್ನು ನೀಡಿದ ಆರೋಪಿಯಾದ ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ನಂತರ ಗೆಳೆತನ ಮಾಡಿಕೊಂಡವನು ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೇಳಿ ಕರೆ ಮಾಡಿ ಹೆದರಿಸಿ ಚಿತ್ರಹಿಂಸೆ ನೀಡಿ, ನಿನ್ನ ಅಶ್ಲೀಲ ಫೋಟೋಗಳನ್ನು ತಾನು ಫೇಸ್ ಬುಕ್ ನಲ್ಲಿ ಹಾಕಿ ನಿನ್ನ ಮಾನ ಮರ್ಯಾದೆ ತೆಗೆದು ನಿನಗೆ ಸಾಯಿಸುತ್ತೇನೆ ,ಇಲ್ಲಾದರೆ ಮರ್ಯಾದೆಗೆ ನೀನೆ ಸಾಯಬೇಕು ಎಂದು ಹೇಳಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವತಿ ಮನನೊಂದು ತನ್ನ ಹಳೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಈತನ ಕಿರುಕುಳವೇ ಕಾರಣ ಎಂದು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಹುಡುಗಿಯ ತಂದೆ ಮುತ್ತಯ್ಯ ಗೋವಾಳಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿ.ಎಸ್.ಐ. ಶ್ರೀಧರ ನಾಯ್ಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಬಾಳಿ ಬದುಕಿ ಉತ್ತಮ ಜೀವನ ನಡೆಸಬೇಕಾದ ಯುವತಿ ಆತ್ಮಹತ್ಯೆಗೆ ಮುಂದಾಗಿರುವುದು ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದ್ದು ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಯುವತಿ ಕುಟುಂಬಸ್ತರು ಆಗ್ರಹಿಸಿದ್ದಾರೆ.