19 ವರ್ಷದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ – 3 ಜನ ಆರೋಪಿಗಳ ಬಂಧನ
ಕಾಸರಗೋಡು- ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19 ವರ್ಷದ ಯುವತಿಗೆ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಧೂರು ಪಟ್ಲ ನಿವಾಸಿ ಶೈನೀಶ್ ಕುಮಾರ್ (30), ಉಪ್ಪಳ ಮಂಗಲ್ಪಾಡಿ ನಿವಾಸಿ ಮೋಕ್ಷಿತ್ ಶೆಟ್ಟಿ (43), ಉಳಿಯತ್ತಡ್ಕದ ಪ್ರಶಾಂತ್ (27) ಎಂದು ಗುರುತಿಸಲಾಗಿದೆ. ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ ಚಂದ್ರಿಕಾ ನೇತೃತ್ವದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಞಂಗಾಡ್ ಮೂಲದ ಮಹಿಳೆಯನ್ನೂ ಬಂಧಿಸಲಾಗಿದೆ.
ಬಡ ಕುಟುಂಬಕ್ಕೆ ಸೇರಿದ ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರಕ್ಕೂ ಮುನ್ನ ಆಮಿಷವೊಡ್ಡಲಾಗಿತ್ತು ಮತ್ತು ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ನೀಡಲಾಗಿತ್ತು.
ತನಿಖೆಯ ಪ್ರಕಾರ, ನೆರೆಹೊರೆಯ ಯುವಕನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವಂತೆ ನಟಿಸಿ, ಮದುವೆಯಾಗುವುದಾಗಿ ಭರವಸೆ ನೀಡಿ, ಹಲವಾರು ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಮಧ್ಯವರ್ತಿ ಮಹಿಳೆಯ ಮೂಲಕ ಬಾಲಕಿಯನ್ನು ಇತರ ಪುರುಷರಿಗೆ ನೀಡಿದ್ದನು ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು.
ಕಾಸರಗೋಡು, ಮಂಗಳೂರು, ಚೆರ್ಕಳ, ತ್ರಿಶೂರು ಮುಂತಾದೆಡೆಯ ಲಾಡ್ಜ್‌ಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಪದೇ ಪದೇ ಅತ್ಯಾಚಾರಕ್ಕೊಳಗಾದ ಬಾಲಕಿ ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಳು. ಆಕೆ ದಾಖಲಾಗಿದ್ದ ಆಸ್ಪತ್ರೆಯಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಪೊಲೀಸ್ ಸಿಬ್ಬಂದಿ ಬಾಲಕಿಯಿಂದ ವಿವರ ಪಡೆದು ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಪುರುಷರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.