ಸರ್ಕಾರ ಪತ್ರಕರ್ತರ ಬೇಡಿಕೆ ಈಡೇರಿಸಲಿ :
ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ`-ಬೇಡಿಕೆ ಈಡೇರಿಸದಿದ್ದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಳತ್ವ ವಹಿಸುವೆ”
ಬೆಂಗಳೂರು : ರಾಜ್ಯದ ಪತ್ರಕರ್ತರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿಗಳಾದ ವಿ. ಗೋಪಾಲ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಡಿ. 23ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಆಯೋಜಿಸಲಾದ `ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ದೇಶದ ಸರ್ವೊಚ್ಛ ನ್ಯಾಯಾಲಯವೇ ಸ್ಪಷ್ಟವಾಗಿ ಹೇಳಿದೆ. ರಾಜ್ಯದಲ್ಲಿ ಸರಿ ಸುಮಾರು ಹದಿನಾರು ಸಾವಿರ ಪತ್ರಕರ್ತರು ಒಂದಿಲ್ಲೊಂದು ಸುದ್ದಿ ಮಾಧ್ಯಮಗಳ ಮೂಲಕ ತಮ್ಮ ಹರಿತವಾದ ಲೇಖನಿಯ ಮೂಲಕ ಸಮಾಜದ ಅಂಕು, ಡೊಂಕು ತಿದ್ದುವುದರೊಂದಿಗೆ ಸರ್ಕಾರಗಳ ಕಣ್ಣು ತೆರೆಯಿಸುವ ಕೆಲಸ ಮಾಡುತ್ತಿದ್ದಾರೆ. ಜೀವದ ಹಂಗು ತೊರೆದು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗದಿರುವುದು ನಿಜಕ್ಕೂ ದುರ್ದೈವದ ಸಂಗತಿ” ಎಂದು ವಿಷಾದ ವ್ತಕ್ತಪಡಿಸಿದರು.
“ಯಾವುದೇ ಸರ್ಕಾರಗಳು 145 ಕೋಟಿ ಜನಸಂಖ್ಯೆಗೆ ಸುಗಮವಾದ ಆಡಳಿತ ನೀಡಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು ಎಂಬುದನ್ನು ಮನಗಾಣಬೇಕಾಗಿದೆ. ಈ ದಿಸೆಯಲ್ಲಿ ಇಂದು ನಡೆಯುತ್ತಿರುವ ವಿಚಾರ ಸಂಕಿರಣ ಮಹತ್ವ ಹೊಂದಿದೆ. ನಮ್ಮನ್ನಾಳುತ್ತಿರುವ ರಾಜಕಾರಣಿಗಳು, ರಾಜಕೀಯ ಮುತ್ಸದಿಗಳು, ಕಾರ್ಯಾಂಗದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಂಗ ಇಲಾಖೆ, ಬುದ್ಧಿ ಜೀವಿಗಳು, ಸಾಮಾಜಿಕ ಚಿಂತಕರು, ಸಮಾಜ ಸುಧಾರಕರು ಕೂಡ ದೀರ್ಘವಾಗಿ ಆಲೋಚಿಸಿ ಅರ್ಥೈಸಬೇಕಾದ ಸಮಯವಿದು. ಆ ದಿಕ್ಕಿನಲ್ಲಿ ಈ ವಿಚಾರ ಸಂಕಿರಣ ಬೆಂಗಳೂರು ಕೇಂದ್ರದಲ್ಲಿ ಎಲ್ಲಾ ಪತ್ರಕರ್ತರನ್ನು, ರಾಜಕಾರಣಿಗಳನ್ನು, ಧರ್ಮಗುರುಗಳನ್ನು, ವಿವಿಧ ಪಕ್ಷಗಳ ನೇತಾರರನ್ನು, ಸಮಾಜ ಸುಧಾರಕರನ್ನು, ಸಮಿತಿಗಳನ್ನು, ಕಲೆಯಲ್ಲಿ ಪರಿಣಿತಿ ಹೊಂದಿದ ಕಲೆಗಾರರನ್ನು, ಸಂಗೀತಗಾರರನ್ನು ಒಂದೆಡೆ ಸೇರಿಸಿ ಒಂದು ಅರ್ಥಪೂರ್ಣ ಸಮಾರಂಭ ಏರ್ಪಡಿಸಿರುವುದು ಶ್ಲಾಘನೀಯ. ಇಂತಹ ಅಭೂತಪೂರ್ವ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿರುವುದು ನನ್ನ ಜೀವನದ ಅವಿಸ್ಮರಣಿಯ ಕ್ಷಣ” ಎಂದರು.
“ಇಂತಹ ಹೃದಯಸ್ಪರ್ಷಿ ಸಮಾರಂಭಗಳನ್ನು ಏರ್ಪಡಿಸಿ ಸರ್ಕಾರದ ಗಮನ ಸೆಳೆಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಮಾರಂಭ ನನ್ನಿಂದ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ನನ್ನ ಮನಸ್ಸು ದೇಶದ ಸಮಸ್ತ ಜನ, ಅದರ ಜೊತೆಗೆ ನಮ್ಮನ್ನು ಅವಲಂಭಿಸಿರುವ ಪ್ರಾಣಿ, ಪಕ್ಷಿಗಳೂ ಕೂಡ ನ್ಯಾಯಯುತವಾಗಿ ಧರ್ಮದ ಅಡಿಯಲ್ಲಿ ಸುಗಮವಾಗಿ ಜೀವನವನ್ನು ಮಾಡುವ ಜವಾಬ್ದಾರಿ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಭಿತವಾಗಿರುತ್ತವೆ. ಜವಾಬ್ದಾರಿಯುತವಾದ ಸರ್ಕಾರಗಳು ಯಾವ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲವೋ ಅದು ಜನಪರವಾದ ಸರ್ಕಾರವಾಗಿರುವುದಿಲ್ಲ. ನಮ್ಮನ್ನಾಳುವ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು, ನೌಕರಶಾಹಿ ವರ್ಗ, ನ್ಯಾಯಾಂಗ ಇಲಾಖೆಯ ಜವಾಬ್ದಾರಿ ಹೊತ್ತಿರುವ ನ್ಯಾಯಾಧೀಶರುಗಳು ಎಲ್ಲಿ ಸಮಪರ್ಕವಾಗಿ ಆಡಳಿತ ನಡೆಯುತ್ತಿಲ್ಲವೋ ಅಂತಹ ಸಂದರ್ಭಗಳಲ್ಲಿ ನಾಗರಿಕ ಸಮಾಜದ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು” ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನದ ಅಡಿಯಲ್ಲಿ ಆಡಳಿತ ನೀಡಲು ವಿಫಲರಾದಾಗ, ಸರ್ಕಾರದ ಉತ್ತಮ ನೀತಿಗಳನ್ನು ಕಾರ್ಯಾಂಗ ಸಮರ್ಪಕವಾಗಿ ಅನುಷ್ಟಾನ ಮಾಡದಿದ್ದರೆ, ಅವರ ಕಾರ್ಯವೈಖರಿ ಪಾರದರ್ಶಕವಾಗಿಲ್ಲದಿದ್ದರೆ ಅದನ್ನು ಎತ್ತಿ ಹಿಡಿಯುವ ಸಂಪೂರ್ಣ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ. ಸುಸಂಸ್ಕøತ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಹಿರಿದಾದುದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು, 145 ಕೋಟಿ ಜನರ ಹಕ್ಕುಗಳನ್ನು ಸಂರಕ್ಷಣೆ ಮಾಡಲು, ಸಂವಿಧಾನವನ್ನು ಸಂರಕ್ಷಿಸಲು, ಪ್ರಜಾಪ್ರಭುತ್ವದ ವ್ಯವಸ್ಥೆ ಸಮರ್ಪಕವಾಗಿ ಎಲ್ಲಾ ಜನರಿಗೂ ಮುಟ್ಟಿಸಲು ಪತ್ರಕರ್ತರು ಅವಶ್ಯ. ಸರ್ಕಾರ ಜನಪರ ಆಡಳಿತ ನೀಡಲು ವಿಫಲರಾದಾಗ ಈ ರೀತಿಯ ಹೋರಾಟಗಳು, ಪ್ರತೀ ದೇಶದಲ್ಲಿ, ಪ್ರಪಂಚದಾದ್ಯಂತ ನಡೆಸುವುದು ಅನಿವಾರ್ಯವಾಗಿದೆ. ಈ ರೀತಿಯ ಹೋರಾಟ ನಡೆಸಲು ಜನರ ಬೆಂಬಲ ಬೇಕಾಗಿದೆ. ಸಂವಿಧಾನದ ಅಡಿಯಲ್ಲಿ ಮೂರೇ ಅಂಗಗಳು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ. ಇದರ ಜೊತೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಹೇಳಿರುವ ಪ್ರಕಾರ ನಾಲ್ಕನೇ ಅವಿಭಾಜ್ಯ ಅಂಗ ಪತ್ರಿಕಾರಂಗ. ಈ ಪತ್ರಿಕಾರಂಗ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಅವರ ಓಡನಾಡಿ ಪತ್ರಕರ್ತರು ಕುಸಿದು ಹೋದರೆ ಸಂವಿಧಾನ ಕುಸಿದು ಹೋಗಬಹುದು. ರಾಜ್ಯದ ಆಡಳಿತ ಕುಸಿಯುತ್ತದೆ. ಭಾರತ ಸರ್ಕಾರದ ಆಡಳಿತ ಕುಸಿಯಬಹುದು. ಅಲ್ಲಿ ನಾಗರಿಕ ಸಮಾಜದ ವ್ಯವಸ್ಥೆ ಕುಸಿಯಬಹುದು” ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
“ಈ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರಕ್ಕೆ ಕಿವಿ ಮಾತನ್ನು ಹೇಳಲು ಬಂದಿದ್ದೇನೆ. ರಾಜ್ಯ ಸರ್ಕಾರ ಈ ಕೂಡಲೇ ಪತ್ರಕರ್ತ ಮುಖಂಡರನ್ನು ಕರೆಯಿಸಿ ಮಾತುಕತೆ ನಡೆಸಿ ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸಬೇಕು. ಸರ್ಕಾರ ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಜನತೆಗೆ ಉಚಿತ ಭಾಗ್ಯ ನೀಡುವುದಾದರೆ, ರಾಜ್ಯದಲ್ಲಿರುವ ಹದಿನಾರು ಸಾವಿರ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಯಾಕಾಗಿ ಹಿಂದೆ ಮುಂದೆ ಯೋಚಿಸುತ್ತಿರಾ? ಪತ್ರಕರ್ತರು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಪ್ರಯಾಣಿಸಲು ನಿಮ್ಮಿಂದ ಉಚಿತ ಬಸ್ ಪ್ರಯಾಣ ಕೇಳುತ್ತಿಲ್ಲ. ಬದಲಿಗೆ ಸಮಾಜದ ಆಗು ಹೋಗುಗಳು ಹಾಗು ನಿಮ್ಮದೇ ಸರ್ಕಾರದ ವಿವಿಧ ಕಾರ್ಯಯೋಜನೆಗಳ ತುಲನಾತ್ಮಕ ವರದಿಗಳಿಗಾಗಿ ಕೇಳುತ್ತಿರುವ ಬೇಡಿಕೆಗಳನ್ನು ಸಹಾನುಬೂತಿಯಿಂದ ನೀಡಬೇಕಾದುದು ಸರ್ಕಾರದ ಕರ್ತವ್ಯ. ಪತ್ರಕರ್ತರಿಗೆ ಯಾವುದೇ ಆದಾಯವಿಲ್ಲ, ನಿಗದಿತ ಸಂಬಳವಿಲ್ಲ, ಒಪ್ಪತ್ತಿನ ಊಟಕ್ಕೂ ಕೈಚಾಚುವಂತಹ ಹೀನಾಯ ಸ್ಥಿತಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪತ್ರಕರ್ತರ ವಲಯದಲ್ಲಿದೆ. ಅವರಿಗೂ ಸಂಸಾರವಿದೆ, ಅವರ ನೋವಿಗೆ ಸ್ಪಂಧಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದರು.
`ಸರ್ಕಾರ ಸ್ಪಂದಿಸದಿದ್ದರೆ ನಾನೇ
ದಾವೆ ಹೂಡಲು ಸಹಕರಿಸುವೆ’
“ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸುವೆ. ಪತ್ರಕರ್ತರು ಈ ಬಗ್ಗೆ ಯಾವುದೇ ಚಿಂತೆ ಮಾಡುವುದು ಬೇಡ. ನಿಮ್ಮ ಸಮಸ್ಯೆಗಳ ಅರಿವು ನನಗೆ ತಿಳಿದಿದೆ. ಸರ್ಕಾರ ನನ್ನ ಮನವಿಗೂ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ನಾನೇ ಮುಂದಾಳತ್ವ ವಹಿಸುವೆ” ಎಂದು ನಿವೃತ್ತ ನ್ಯಾಯ ಮೂರ್ತಿಗಳಾದ ವಿ. ಗೋಪಾಲ ಗೌಡ ಭರವಸೆ ನೀಡಿದರು.
`ನಿಮ್ಮೆಲ್ಲರ ಸಹಕಾರ ಇದೇ ರೀತಿ ಇರಲಿ’
ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, “ಸಂಘಟನೆಯನ್ನು ಬಲಪಡಿಸಿ ನೊಂದ ಹದಿನಾರು ಸಾವಿರ ಪತ್ರಕರ್ತರ ಬಾಳಿಗೆ ನೇರವಾಗುವ ಸದುದ್ದೇಶದಿಂದ ಈ ಸಂಘಟನೆಯನ್ನು ವರ್ಷದ ಹಿಂದೆ ಹುಟ್ಟು ಹಾಕಲಾಗಿದೆ. ನಮ್ಮ ಅಹವಾಲುಗಳಿಗೆ ಸರ್ಕಾರ ಸ್ಪಂದಿಸಿ ರಾಜ್ಯದಲ್ಲಿ ನಿರ್ಭೀತ, ಸುರಕ್ಷತೆ ಹಾಗೂ ಇನ್ನಿತರ ಸೌಲಭ್ಯ ಪತ್ರಕರ್ತರಿಗೆ ಸಿಗುವ ವರೆಗೂ ವಿರಮಿಸುವುದಿಲ್ಲ. ಯಾವುದೇ ಪತ್ರಕರ್ತ ಸುದ್ದಿ ಮಾಡುವಾಗ ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವಂತಾಗಲು ನಿಮ್ಮೆಲ್ಲರ ಪ್ರತಿನಿಧಿಯಾಗಿ ಕೆಲಸ ಮಾಡುವೆ. ನನ್ನ ಕರೆಗೆ ಓಗೊಟ್ಟು ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪತ್ರಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದು, ನನ್ನ ನೈತಿಕ ಸ್ಥೈರ್ಯ ಹೆಚ್ಚಿಸಿದ್ದಿರಿ. ನಿಮ್ಮೆಲ್ಲರ ಸಹಕಾರ ಇದೇ ರೀತಿ ಇರಲಿ” ವಿನಮ್ರವಾಗಿ ಹೇಳಿದರು.
ರಾಷ್ಟ್ರ ಸಂಘ ಸಮಿತಿಯ ಡಾ. ಪರಮಾತ್ಮಾಜಿ ಮಹಾರಾಜ, ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಸತೀಶ ಕುಮಾರ ಹೊಸಮನಿ, ಖ್ಯಾತ ಚಿತ್ರನಟ ವಿನೋದ ರಾಜ್, ಖ್ಯಾತ ಚಿತ್ರನಟಿ ಅಭಿನಯ, ಹೈಕೋರ್ಟ್ ನ್ಯಾಯವಾದಿ ಹರೀಶ ಗಣಪತಿ, ಕೆಪಿಸಿಸಿ ಕಾರ್ಯದರ್ಶಿ ವೈ ಸಯೀದ್ ಅಹಮದ್, ಕರವೇ ಅಧ್ಯಕ್ಷ ಶಿವರಾಮೆ ಗೌಡ, ಹಂಸಲೇಖ ಪತ್ರಿಕೆಯ ಸಂಪಾದಕ ಜಿ. ರಾಮಾಚಾರ್, ಹಿರಿಯ ಪತ್ರಕರ್ತ ಆಲೂರು ಹನುಮಂತ ರಾಯಪ್ಪ, ವಿಶ್ವದರ್ಶನ ಪತ್ರಿಕೆಯ ಸಂಪಾದಕ ಡಾ. ಎಸ್. ಎಸ್. ಪಾಟೀಲ್ ಇನ್ನಿತರರು ಇದ್ದರು.
ಸಭಾಕಾರ್ಯಕ್ರಮದ ನಂತರ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘನೆಯ ಜಿಲ್ಲಾಧ್ಯಕ್ಷರು ಹಾಗೂ ತಾಲೂಕಾಧ್ಯಕ್ಷರನ್ನು ಗೌರವಿಸಲಾಯಿತು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮನರಂಜನಾ ಕಾರ್ಯಕ್ರಮ ಹಾಗೂ ಇನ್ನಿತರ ಪ್ರತಿಭಗಳು ಅನಾವರಣಗೊಂಡವು.