ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಭಟ್ಕಳದ ಶ್ರೀ ಮಾರಿಕಾಂಬಾ ಮಾರಿ ಜಾತ್ರೆ ಆಗಸ್ಟ್ 5 ಮತ್ತು 6ರಂದು ಸಂಪ್ರದಾಯಬದ್ಧವಾಗಿ ನಡೆಯಲಿದೆ. ಈ ಜಾತ್ರೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಜೊತೆಗೆ ಶಿರೂರು, ಬೈಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪಾದ ಕಂಚುಗಾರ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜುಲೈ 28ರಂದು ಶುಭ ಮುಹೂರ್ತದಲ್ಲಿ ಮಾರಿದೇವಿಯ ಮೂರ್ತಿ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಆಗಸ್ಟ್ 4ರಂದು ಮಣ್ಕುಳಿ ಆಚಾರ್ಯರ ಮನೆತನದಲ್ಲಿ ಸುವಾಸಿನಿ ಪೂಜೆ ನೆರವೇರಲಿದ್ದು, ಆಗಸ್ಟ್ 5ರ ಮುಂಜಾನೆ ಅಲ್ಲಿಂದ ಮೂರ್ತಿಯನ್ನು ದೇವಸ್ಥಾನ ಆಡಳಿತ ಮಂಡಳಿಗೆ ವಿಧಿವತ್ತಾಗಿ ಹಸ್ತಾಂತರಿಸಲಾಗುತ್ತದೆ. ನಂತರ ಭವ್ಯ ಮೆರವಣಿಗೆಯ ಮೂಲಕ ಬೆಳಗ್ಗೆ ಸುಮಾರು 5.30ಕ್ಕೆ ದೇವಸ್ಥಾನಕ್ಕೆ ಕರೆತರಲಿರುವ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಈ ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ, ಮೂರ್ತಿ ಪ್ರತಿಷ್ಠೆಯಾದ ಬಳಿಕ ಜೈನ ಸಮುದಾಯದ ಅರ್ಚಕರು ಮೊದಲ ಪೂಜೆಯನ್ನು ನೆರವೇರಿಸುವ ಸಂಪ್ರದಾಯ. ಇದು ಭಟ್ಕಳದ ಧಾರ್ಮಿಕ ಸಾಮರಸ್ಯ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಪರಿಗಣಿಸಲಾಗಿದೆ.
ಭಕ್ತರಿಗೆ ಆಗಸ್ಟ್ 5ರಂದು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಹಾಗೂ ಆಗಸ್ಟ್ 6ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 4ರವರೆಗೆ ದೇವಿಯ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸುಗಮ ಸಂಚಾರ, ಅಗತ್ಯ ಮೂಲಸೌಕರ್ಯ ಹಾಗೂ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ.
ಆಗಸ್ಟ್ 6ರಂದು ಮಧ್ಯಾಹ್ನ 4 ಗಂಟೆಗೆ ವಿಶೇಷ ಪ್ರಾರ್ಥನೆ ಮತ್ತು 4.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ಸುಮಾರು 7 ಕಿಲೋಮೀಟರ್ ಉದ್ದದ ಮೆರವಣಿಗೆಯ ಮೂಲಕ ಮುಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿಕೋಡಿ ಮಾರ್ಗವಾಗಿ ಮಾರಿದೇವಿಯ ಮೂರ್ತಿಯನ್ನು ಸಮುದ್ರ ತೀರಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಧಾರ್ಮಿಕ ಸಂಪ್ರದಾಯದಂತೆ ವಿಸರ್ಜನಾ ವಿಧಿವಿಧಾನಗಳು ನೆರವೇರಲಿವೆ.
ಈ ಬಾರಿಯಿಂದ ಭಕ್ತರು ಸಮರ್ಪಿಸುವ ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಅದರ ಬದಲಾಗಿ ಕುಂಕುಮ ಪ್ರಸಾದ ಮತ್ತು ಪಂಚಕಜ್ಜಾಯವನ್ನು ಪ್ರತ್ಯೇಕ ಪ್ಯಾಕ್‌ಗಳಲ್ಲಿ ವಿತರಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಈ ಹೊಸ ವ್ಯವಸ್ಥೆಗೆ ಭಕ್ತರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಇನ್ನೊಂದೆಡೆ, ಸಮುದ್ರ ತೀರದಲ್ಲಿ ನಡೆಯುವ ವಿಸರ್ಜನಾ ಪೂಜೆಯ ಬಳಿಕದ ಪವಿತ್ರ ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಫೋಟೋ ಅಥವಾ ವೀಡಿಯೊ ಸೇರಿದಂತೆ ಯಾವುದೇ ರೀತಿಯ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ರಾಮಚಂದ್ರ ಮಹಾಲೆ, ದಿನೇಶ ನಾಯ್ಕ, ಕೇಶವ ನಾಯ್ಕ, ಸಂದೀಪ ಕೊಲ್ಲೆ, ಜೀವೋತ್ತಮ ಪೈ, ಪ್ರೀತಮ್ ಶೇಟ್ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.
