ಮೈಸೂರು: ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ ಹಾಗೂ ಅವರ ಆಪ್ತ ಸಹಾಯಕ ಶಿವಕುಮಾರ್ ಅವರು ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಎಚ್.ಡಿ.ಕೋಟೆ ತಾಲೂಕಿನ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದು ಹುಣಸೂರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿವಾಸಿ ಡಾ. ರೂಪಾ ಅವರಿಂದ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.ಈ ಮೊತ್ತದಲ್ಲಿ ಮೊದಲ ಕಂತಾಗಿ ₹5 ಲಕ್ಷ ಈಗಾಗಲೇ ಸ್ವೀಕರಿಸಲಾಗಿದ್ದು, ಉಳಿದ ₹5.50 ಲಕ್ಷವನ್ನು ಎರಡನೇ ಕಂತಾಗಿ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಉಪವಿಭಾಗಾಧಿಕಾರಿಯ ನಿವಾಸದಲ್ಲೇ ಹಣ ಪಡೆಯುವ ವೇಳೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾವ್ಯಾರಾಣಿ ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಭಟ್ಕಳ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ನಡೆಸಲಾಯಿತು. ತನಿಖಾಧಿಕಾರಿ ರವಿಕುಮಾರ್, ಮಡಿಕೇರಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಇನ್‌ಸ್ಪೆಕ್ಟರ್ ವೀಣಾ ನಾಯಕ್ ಹಾಗೂ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

