ಶಿರಸಿ: ಅಂತರರಾಷ್ಟ್ರೀಯ ಮಟ್ಟದ ಏಷ್ಯಾ ಪೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಯೋಗ ಸಾಧಕ ನಂದನ್ ನರಸಿಂಹ ಭಟ್ ಅವರಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ವೈಯಕ್ತಿಕ ಸಹಾಯಧನ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಆಧ್ಯಾತ್ಮಿಕ ಯೋಗ ಕ್ಷೇತ್ರದಲ್ಲಿ ನಂದನ್ ಭಟ್ ಸಾಧಿಸಿರುವ ಯಶಸ್ಸು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಇದೀಗ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವುದು ಶ್ಲಾಘನೀಯ. ಯುವಕರು ಇಂತಹ ಸಾಧನೆಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ. ಸೆಪ್ಟೆಂಬರ್ 4ರಿಂದ 9ರವರೆಗೆ ನಡೆಯಲಿರುವ ಏಷ್ಯಾ ಪೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದುಕೊಡಲಿ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು” ಎಂದು ಹೇಳಿದರು.
ಸಹಾಯಧನ ಸ್ವೀಕರಿಸಿ ಮಾತನಾಡಿದ ನಂದನ್ ನರಸಿಂಹ ಭಟ್, “ಮೊದಲು ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದೆ. ಬಳಿಕ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲೂ ಮೊದಲ ಸ್ಥಾನ ಗಳಿಸಿದ್ದೇನೆ. ಇದೀಗ ಏಷ್ಯಾ ಪೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಅತ್ಯಂತ ಸಂತಸದ ವಿಷಯ” ಎಂದರು.
“ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿದ್ದೇನೆ. ವಿವಿಧ ಸ್ಪರ್ಧೆಗಳಿಗೆ ತೆರಳಲು ನನ್ನ ತಂದೆ-ತಾಯಿ ಸದಾ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ್ದಾರೆ. ಯೋಗಾಭ್ಯಾಸದಿಂದ ನನ್ನ ಏಕಾಗ್ರತೆ ಹೆಚ್ಚಿದ್ದು, ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಬಿ.ಎಸ್‌ಸಿ (ಯೋಗ) ವ್ಯಾಸಂಗ ಮಾಡಿ ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಗುರಿ ಹೊಂದಿದ್ದೇನೆ” ಎಂದು ಅವರು ತಿಳಿಸಿದರು.
