ಭಟ್ಕಳ: ಸಾಲ ಪಡೆದ ಬಳಿಕ ಅದನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿಯ ನಕಲಿ ಪತ್ರಕರ್ತ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಭಟ್ಕಳದ ಈಶ್ವರ ಹೊನ್ನಪ್ಪ ನಾಯ್ಕ ಅವರಿಂದ ರವೀಶ ಹೆಗಡೆ ಅವರು ಕೈಗಡ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲದ ಮೊತ್ತವನ್ನು ಹಿಂದಿರುಗಿಸುವ ಉದ್ದೇಶದಿಂದ ಚೆಕ್ ನೀಡಿದ್ದರು. ಆದರೆ ಬ್ಯಾಂಕ್‌ಗೆ ಸಲ್ಲಿಸಿದ ಸಂದರ್ಭದಲ್ಲಿ ಚೆಕ್ ಅಮಾನ್ಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಸಾಲದ ಹಣವನ್ನು ಪಾವತಿಸುವಂತೆ ಸೂಚಿಸಿದ್ದರೂ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಈಶ್ವರ ನಾಯ್ಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯದಿಂದ ರವೀಶ ಹೆಗಡೆ ಅವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು.ವಾರೆಂಟ್ ಜಾರಿಯಾದ ಬಳಿಕವೂ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಶಿರಸಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಇದಲ್ಲದೆ, ಆತ್ಮಹತ್ಯೆ ಪ್ರಕರಣ ಹಾಗೂ ಕೆಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದ ಕಾರು ಸಾಲ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ರವೀಶ ಹೆಗಡೆ ಅವರ ಹೆಸರು ಆರೋಪಿಯಾಗಿ ಕೇಳಿಬಂದಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಗಳ ಕುರಿತ ಅಂತಿಮ ನಿರ್ಧಾರವನ್ನು ಸಂಬಂಧಿಸಿದ ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳ ಆಧಾರದ ಮೇಲೆ ಪರಿಗಣಿಸಬೇಕಿದೆ.
