ಭಟ್ಕಳ: ಅನುಮತಿ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದರೆಂದು ಆರೋಪಿಸಲಾದ ಲಾರಿಯನ್ನು ಶಿರಾಲಿ ಚೆಕ್‌ಪೋಸ್ಟ್ ಬಳಿ ತಡೆದು ಪರಿಶೀಲಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು 13 ಹೋರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮುಂಜಾನೆ ಸುಮಾರು 2.50ರ ವೇಳೆಗೆ ಈ ಕಾರ್ಯಾಚರಣೆ ನಡೆದಿದೆ.
ಹೊನ್ನಾವರ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ ಟಾಟಾ 909 ಲಾರಿಯನ್ನು ಶಿರಾಲಿ ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ವಾಹನದಲ್ಲಿ 13 ಜಾನುವಾರುಗಳನ್ನು ಕಟ್ಟಿಹಾಕಿರುವುದು ಪತ್ತೆಯಾಗಿದೆ. ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಮತ್ತು ಮೇವು ನೀಡದೆ, ಸೂಕ್ತ ಅನುಮತಿ ಪಡೆಯದೇ ಸಾಗಿಸಲಾಗುತ್ತಿತ್ತು ಎಂದು ಪ್ರಕರಣದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಾಚರಣೆಯಲ್ಲಿ 13 ಹೋರಿಗಳು ಹಾಗೂ ಅವುಗಳನ್ನು ಕಟ್ಟಲು ಬಳಸಲಾಗಿದ್ದ 13 ಹಗ್ಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಾನುವಾರುಗಳ ಅಂದಾಜು ಮೌಲ್ಯ ₹13 ಲಕ್ಷವಾಗಿದ್ದು, ಲಾರಿಯ ಮೌಲ್ಯವನ್ನು ಸುಮಾರು ₹7 ಲಕ್ಷ ಎಂದು ದಾಖಲಿಸಲಾಗಿದೆ.

ಪೊಲೀಸರ ತಪಾಸಣೆ ಗಮನಕ್ಕೆ ಬರುತ್ತಿದ್ದಂತೆ ಲಾರಿಯ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ತೆರಳಿದ್ದಾರೆ. ಇಬ್ಬರ ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಬಿಎನ್‌ಎಸ್‌ನ ಸಂಬಂಧಿತ ಕಲಂಗಳ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಪಿಎಸ್ಐ ಭರಮಪ್ಪ ಬೆಳಗಲಿ ಅವರ ನೇತೃತ್ವದಲ್ಲಿ ಮಂಜುನಾಥ ಖಾರ್ವಿ, ನಾಗರಾಜ ಹೋತನಳ್ಳಿ, ಅಂಬರೀಷ್ ಕುಂಬಾರಿ, ಮೋಹನ ಕಬ್ಬೇರ, ಸಂತೋಷ ಹಡಪದ ಹಾಗೂ ಹೋಂ ಗಾರ್ಡ್ ವೆಂಕಟ್ರಮಣ ಗೊಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆಯನ್ನು ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನಡೆಸುತ್ತಿದ್ದಾರೆ.
