50 ಸಾವಿರ ರೂ. ಹಣ ಲಂಚ ಪಡೆಯುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪಿ.ಎಸ್.ಐ ರಾಧಾ
ಮೈಸೂರು -ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗಲೇ ಮಹಿಳಾ ಸಬ್ ಇನ್ಸ್ಪೆಕ್ಟರ್ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ 50 ಸಾವಿರ ರೂ. ಹಣ ಪಡೆಯುವಾಗ ಸಬ್ ಇನ್ಸ್‌ಪೆಕ್ಟರ್ ರಾಧಾ ಸಿಕ್ಕಿ ಬಿದ್ದಿದ್ದಾರೆ. ರಾಧಾ ಅವರನ್ನ ವಶಕ್ಕೆ ಪಡೆದು ತನಿಖೆಕೈಗೊಂಡಿರುವುದಾಗಿ ಲೋಕಾಯುಕ್ತ ಅಧೀಕ್ಷಕರುತಿಳಿಸಿದ್ದಾರೆ. ಮೈಸೂರಿನ ಕೆ ಆರ್ ಮೊಹಲ್ಲಾ ನಿವಾಸಿಯಾದ ಸಿವಿಲ್ ಕಾಂಟ್ರಾಕ್ಟರ್ ಮಹೇಶ್ ಎಂಬುವರು ಮೇ 13 ರಂದು ಮೈಸೂರು ಲೋಕಾಯುಕ್ತ ಠಾಣೆಗೆ ಹಾಜರಾಗಿ ನೀಡಿದ ದೂರಿನ ಆಧಾರದ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಕುವೆಂಪು ನಗರದ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ತಮಗೆ ಸೇರಿದ ಚಿನ್ನಾಭರಣ, ಆಸ್ತಿ, ಬ್ಯಾಂಕ್ ಪಾಸ್ ಬುಕ್, ಲಾಕರ್ ಕೀ, ಕಾರ್ ಸೇರಿದಂತೆ ಇತರ ಸೊತ್ತನ್ನು ಕುವೆಂಪುನಗರದ ಮಹಿಳಾ ಸಬ್ ಇನ್ಸ್ಪೆಕ್ಟ ರಾಧಾ ವಶಕ್ಕೆ ಪಡೆದು ಕೊಂಡಿದ್ದರು. ಈ ವಸ್ತುಗಳನ್ನ ವಾಪಸ್ ಕೊಡಲು ಎರಡು ಲಕ್ಷ ಹಣ ನೀಡುವಂತೆ ಸಬ್ ಇನ್ಸ್‌ಪೆಕ್ಟಬೇಡಿಕೆ ಇಟ್ಟಿದ್ದರು ಎಂದು ಸಿವಿಲ್ ಕಾಂಟ್ರಾಕ್ಟರ್ ಮಹೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಂದು ಕಾರ್ಯಾಚರಣೆ ಕೈಗೊಂಡಾಗ ಪೊಲೀಸ್ ಠಾಣೆಯಲ್ಲಿ ಮಹೇಶ್ ಅವರಿಂದ ಸಬ್ ಇನ್ಸ್‌ಪೆಕ್ಟರ್ ರಾಧಾ 50 ಸಾವಿರ ರೂ. ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರಾದ ಪ್ರಶಾಂತ್ ಕುಮಾರ ಠಾಕೂರ್ ಮತ್ತು ಪೊಲೀಸ್ ಮಹಾನಿರೀಕ್ಷಕರಾದ ಸುಬ್ರಹ್ಮಣೇಶ್ವರರಾವ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅಧೀಕ್ಷಕರಾದ ಸಜೀತ್ ವಿ.ಜೆ ಅವರ ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ಇಂದಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.